ತಾಯಿಯನ್ನು ಕೊಂದ ಮಗ- ಶಾಲೆ ಸ್ವಚ್ಚಗೊಳಿಸುವ ಶಿಕ್ಷೆ ನೀಡಿದ ಹೈಕೋರ್ಟ್
ಮಂಗಳೂರು: ಕೊಡಗು ಸಂಪಾಜೆಯ ಚೆಡಾವಿನ ಮಾದಕ ವ್ಯಸನಿ ಮಗ ತನ್ನ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿ ದ್ದು, ಆರೋಪಿಗೆ ಸಮುದಾಯ ಸೇವೆಯ ಶಿಕ್ಷೆ ನೀಡಿದೆ.
2014ರಲ್ಲಿ ಅನಿಲ್ ಎಂಬಾತ ತನ್ನ ತಾಯಿ ಗಂಗಮ್ಮ ಅವರನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಆತ ಎರಡು ವರ್ಷ ಜೈಲು ಶಿಕ್ಷೆ ಕೂಡ ಅನುಭವಿಸಿದ್ದ. ಬಳಿಕ ಅಧೀನ ನ್ಯಾಯಾಲಯ ಅತನನ್ನು ಖುಲಾಸೆಗೊಳಿಸಿತ್ತು.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಡಿಕೇರಿ ಪೊಲೀಸರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಸ್. ಮುದ್ಗಲ್ ಮತ್ತು ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಅಧೀನ ನ್ಯಾಯಾಲಯದ ಆದೇಶ ರದ್ದುಗೊಳಿಸಿ ಆತನಿಗೆ ಸಮುದಾಯ ಸೇವೆಯ ಶಿಕ್ಷೆ ಪ್ರಕಟಿಸಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ವಿಭಾಗೀಯ ಪೀಠ, ಮೃತ ಗಂಗಮ್ಮ ಆಲೋಹಾಲಿಕ್ ಅಲ್ಸರ್ ನಿಂದ ಬಳಲುತ್ತಿದ್ದರು ಅನ್ನು ವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾ ಲಯದ ತೀರ್ಪನ್ನು ರದ್ದುಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ.
ಆರೋಪಿಗೆ ಸಂಪಾಜೆ ಸರಕಾರಿ ಶಾಲೆ ಆವರಣ ಸ್ವಚ್ಛಗೊಳಿಸು ವುದು, ಅದರ ನಿರ್ವಹಣೆ ಮಾಡುವುದು, ತೋಟ ನೋಡಿಕೊಳ್ಳುವುದು ಮತ್ತಿತರ ಸಮುದಾಯ ಸೇವೆ ಸಲ್ಲಿಸುವ ಶಿಕ್ಷೆಗೆ ಒಳಗಾಗುವಂತೆ ಆದೇಶ ನೀಡಿದೆ. ಒಂದು ವೇಳೆ ಆತ ಸಮುದಾಯ ಸೇವೆ ಮಾಡದಿದ್ದರೆ ಹೆಚ್ಚುವರಿಯಾಗಿ 25 ಸಾವಿರ ರೂ. ದಂಡ ಮತ್ತು ಮೂರು ತಿಂಗಳು ಸೆರೆವಾಸ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಘಟನೆ ವಿವರ
ದುಶ್ಚಟಗಳಿಂದ ದಾರಿ ತಪ್ಪಿದ ಮಗ ಅನಿಲ್‌ನನ್ನು ಅವರ ತಾಯಿ ಗಂಗಮ್ಮ 2015ರ ಏ.4ರಂದು ಬೈಯ್ದಿದ್ದರು. ಇಷ್ಟಕ್ಕೆ ಸಿಟ್ಟಾದ ಮಗ ತಾಯಿಗೆ ದೊಣ್ಣೆಯಿಂದ ಹೊಡೆದು ಥಳಿಸಿದ್ದ. ತಾಯಿ ಗಂಭೀರ ಗಾಯಗೊಂಡಿದ್ದು, ಸುಳ್ಯದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಏ.5ರಂದು ಮೃತಪಟ್ಟಿದ್ದರು. ಆರೋಪಿ ಪುತ್ರನ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿ 2017ರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿತ್ತು.