ಮಂಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ - ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ನನ್ನು ಖೆಡ್ಡಾಕ್ಕೆ ಕೆಡವಿದ ಎನ್ಐಎ
Friday, May 10, 2024
ಮಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಎನ್ಐಎ ಮತ್ತೊಬ್ಬ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿದೆ. ಈ ಮೂಲಕ ನಾಲ್ಕನೇ ಪ್ರಮುಖ ಆರೋಪಿ ಶುಕ್ರವಾರ ಎನ್ಐಎ ಬಲೆಗೆ ಬಿದ್ದಿದ್ದಾನೆ.
ಸುಳ್ಯದ ಮುಸ್ತಫಾ ಪೈಚಾರು ಎಂಬಾತ ಬಂಧಿತ ಆರೋಪಿ. ಎನ್ಐಎ ಅಧಿಕಾರಿಗಳು ಈತನನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಈತ ಸಕಲೇಶಪುರದ ಆನೆಮಹಲ್ ಗ್ರಾಮದ ಸಿರಾಜ್ ಎಂಬುವರ ಬಳಿ ಈತ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿರಾಜ್ ಎಂಬವರನ್ನು ಸಹ ಎನ್ಐಎ ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ಜೊತೆಗೆ ಸಿರಾಜ್ ಬಳಿ ಕೆಲಸ ಮಾಡಿಕೊಂಡಿದ್ದ ಮತ್ತೋರ್ವ ವ್ಯಕ್ತಿ ಇಲಿಯಾಸ್ ಎಂಬಾತನನ್ನು ಸಹ ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
2022ರ ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರುವನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಆರೋಪಿ ಮುಸ್ತಫಾ ಬಂಧನಕ್ಕೆ ಎನ್ಐಎ ಲುಕ್ ಔಟ್ ನೋಟೀಸ್ ಹೊರಡಿಸಿದ್ದು, ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.