ಬೆಂಗಳೂರು: ಗನ್ ಪಾಯಿಂಟ್ ಇಟ್ಟು ಅತ್ಯಾಚಾರ, ಬೆದರಿಕೆ - ಪ್ರಜ್ವಲ್ ರೇವಣ್ಣ ವಿರುದ್ಧ ಜೆಡಿಎಸ್ ನಾಯಕಿಯಿಂದಲೇ ಎಸ್ಐಟಿಗೆ ದೂರು
Saturday, May 4, 2024
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಜೆಡಿಎಸ್ ಪಕ್ಷದ ಜಿಪಂ ಮಾಜಿ ಸದಸ್ಯೆ ಅತ್ಯಾಚಾರದ ಆರೋಪ ಮಾಡಿದ್ದು, ಗನ್ ಪಾಯಿಂಟ್ ಇಟ್ಟು ತನ್ನನ್ನು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಬೆಂಗಳೂರಿನ ಸಿಐಡಿ ಠಾಣೆಗೆ ದೂರು ನೀಡಿದ್ದಾರೆ.
44 ವರ್ಷದ ಮಹಿಳೆ ಕೃತ್ಯದ ಬಗ್ಗೆ ನೀಡಿರುವ ದೂರನ್ನು ಆಧರಿಸಿ ಅತ್ಯಾಚಾರ ಆರೋಪದಡಿ ಸಿಐಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನರ ಕೆಲಸ ಮಾಡಿಸುವುದಕ್ಕಾಗಿ ಶಾಸಕ ಹಾಗೂ ಸಂಸದರ ಬಳಿ ಹೋಗುತ್ತಿದ್ದೆ. ಕೆಲ ತಿಂಗಳ ಹಿಂದೆಯಷ್ಟೇ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕಚೇರಿ ಹಾಗೂ ಕ್ವಾಟ್ರರ್ಸ್‌ಗೆ ಹೋಗಿದ್ದೆ. ಒಂದು ದಿನ ಹೋದಾಗ ಪ್ರಜ್ವಲ್ ಇರಲಿಲ್ಲ. ಮರುದಿನ ಬರುವಂತೆ ಹೇಳಿದ್ದರು. ಮರುದಿನ ಸಂಸದ ಪ್ರಜ್ವಲ್ ಕ್ವಾರ್ಟರ್ಸ್ ಗೆ ಹೋಗಿದ್ದೆ. ಅಲ್ಲಿ ತನ್ನನ್ನು ಮೊದಲ ಮಹಡಿಗೆ ಕಳುಹಿಸಿದ್ದರು. ಅಲ್ಲಿ ಕೆಲ ಮಹಿಳೆಯರಿದ್ದರು. ಪ್ರಜ್ವಲ್ ಬೇರೆ ಮಹಿಳೆಯರನ್ನು ಮಾತನಾಡಿಸಿ ವಾಪಸು ಕಳುಹಿಸಿದ್ದರು. ಬಳಿಕ ನಾನೊಬ್ಬಳೇ ಉಳಿದುಕೊಂಡಿದ್ದೆ. ಎಲ್ಲರೂ ಹೋದ ಬಳಿಕ, ನನ್ನ ಕೈ ಹಿಡಿದು, ಕೊಠಡಿಯೊಳಕ್ಕೆ ಎಳೆದೊಯ್ದಿದ್ದರು. ಕೊಠಡಿ ಬಾಗಿಲು ಹಾಕಿ ಒಳಗಿನಿಂದ ಲಾಕ್ ಮಾಡಿದ್ದರು. ಲಾಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಏನೂ ಮಾಡೋದಿಲ್ಲ ಎಂದಿದ್ದರು.
'ನಿನ್ನ ಪತಿಯಿಂದಾಗಿ ತಾಯಿಗೆ ಎಂಎಲ್‌ಎ ಟಿಕೆಟ್ ತಪ್ಪಿತೆಂದು ಹೇಳಿದ್ದರು. ನಂತರ, ನನಗೆ ಬಟ್ಟೆ ಬಿಚ್ಚುವಂತೆ ಹಾಗೂ ಮಂಚದ ಮೇಲೆ ಮಲಗುವಂತೆ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದಿದ್ದಾಗ, 'ನನ್ನ ಬಳಿ ಗನ್ ಇದೆ. ಹೇಳಿದಂತೆ ಕೇಳದಿದ್ದರೆ, ನಿನ್ನನ್ನು ಹಾಗೂ ನಿನ್ನ ಪತಿಯನ್ನು ಮುಗಿಸುತ್ತೇನೆ ಎಂದು ಪ್ರಜ್ವಲ್ ಬೆದರಿಸಿದ್ದರು. ಆತನಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದೆ. ಆದರೆ, ನನ್ನ ಕೈಗಳನ್ನು ಬಿಗಿಯಾಗಿ ಹಿಡಿದು ನನ್ನ ಬಟ್ಟೆಗಳನ್ನು ಒತ್ತಾಯದಿಂದ ಬಿಚ್ಚಿದ್ದಾನೆ. ಬೊಬ್ಬೆ ಹಾಕುತ್ತೇನೆ ಎಂದಾಗ, ತನ್ನ ಮೊಬೈಲ್ ತೆಗೆದು ಚಿತ್ರೀಕರಣ ಮಾಡಿಕೊಂಡಿದ್ದ. ಅದೇ ವಿಡಿಯೊ ನನಗೆ ತೋರಿಸಿ, 'ನೀನು ನಾನು ಹೇಳಿದಂತೆ ಕೇಳದಿದ್ದರೆ, ವಿಡಿಯೋವನ್ನು ಎಲ್ಲರಿಗೂ ತೋರಿಸಿ ನಿನ್ನ ಮರ್ಯಾದೆ ಕಳೆಯುತ್ತೇನೆ ಎಂದು ಪ್ರಜ್ವಲ್ ಬ್ಲಾಕ್‌ಮೇಲ್ ಮಾಡಿದ್ದರು ಎಂಬುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಆ ವೀಡಿಯೊವನ್ನು ಮುಂದಿಟ್ಟು ಪ್ರಜ್ವಲ್ ಹಲವು ಬಾರಿ ನನ್ನನ್ನು ಒತ್ತಾಯದಿಂದ ತಮ್ಮ ಕ್ವಾರ್ಟರ್ಸ್ ಗೆ ಕರೆದು ಪದೇಪದೇ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ, ಆಗಾಗ ವೀಡಿಯೊ ಕರೆ ಮಾಡಿ ಬಟ್ಟೆ ಬಿಚ್ಚುವಂತೆ ಪೀಡಿಸುತ್ತಿದ್ದರು. ವಿಡಿಯೋ ಬ್ಲಾಕ್‌ಮೇಲ್ ಹಾಗೂ ಪತಿಯನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದರಿಂದ, ಪ್ರಜ್ವಲ್ ಹೇಳಿದಂತೆ ಇಷ್ಟು ದಿನ ಕೇಳಿದ್ದೆ. ಇದೀಗ, ಪ್ರಜ್ವಲ್ ವಿರುದ್ಧ ಎಸ್‌ಐಟಿ ತನಿಖೆ ನಡೆಯುತ್ತಿದೆ. ಹೀಗಾಗಿ, ಎಸ್‌ಐಟಿ ಎದುರು ಹಾಜರಾಗಿ ಹೇಳಿಕೆ ಕೊಟ್ಟು, ದೂರು ನೀಡುತ್ತಿದ್ದೇನೆ. ನನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಒತ್ತಾಯಿಸಿದ್ದಾರೆ.