ಅಪ್ರಾಪ್ತೆಯನ್ನು ನಂಬಿಸಿ ಲೈಂಗಿಕ ಸಂಪರ್ಕ: ಗರ್ಭವತಿಯಾದ್ಲು ಬಾಲಕಿ - ಆರೋಪಿಗೆ ಕಾಲಿಗೆ ಗುಂಡಿಕ್ಕಿ ಅರೆಸ್ಟ್
Saturday, May 4, 2024
ಹುಬ್ಬಳ್ಳಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಸದ್ದಾಂಹುಸೇನ ಲಿಂಬುವಾಲೆ(19) ಬಂಧಿತ ಆರೋಪಿ. ಈತ ನವನಗರ ಠಾಣಾ ವ್ಯಾಪ್ತಿಯ 17 ವರ್ಷದ ಯುವತಿಯನ್ನು ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅಪ್ರಾಪ್ತೆಯನ್ನು ಆಕೆಯ ಪೋಷಕರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ಆಕೆ ಗರ್ಭಿಣಿಯಾಗಿರುವ ಸಂಗತಿ ಗೊತ್ತಾಗಿದೆ ಎನ್ನಲಾಗಿದೆ. ಈ ಕುರಿತು ಬಲವಂತವಾಗಿ ಲೈಂಗಿಕ ದೌರ್ಜನ್ಯ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮೊದಲು ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಪಿಎಂಸಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ತನಿಖೆ ಕೈಗೊಂಡ ಪೊಲೀಸರು ಆರೋಪಿ ಸದ್ದಾಂಹುಸೇನ ಲಿಂಬುವಾಲೆನನ್ನು ತಕ್ಷಣ ಬಂಧಿಸಲು ಪ್ರಕ್ರಿಯೆ ಆರಂಭಿಸಿದ್ದಾರೆ. ಶುಕ್ರವಾರ ರಾತ್ರಿಯೇ ಆತನ ಸುತಗಟ್ಟಿ ಗ್ರಾಮಕ್ಕೆ ತೆರಳಿದಾಗ, ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ವಿದ್ಯಾಗಿರಿ ಪೊಲೀಸ್ ಠಾಣೆ ಸಿಬ್ಬಂದಿ ಅರುಣ್ ಹಾಗೂ ಇನ್‌ಸ್ಪೆಕ್ಟರ್ ಅವರ ಕಾಲಿಗೆ ಗಾಯವಾಗಿದೆ. ತಕ್ಷಣ ಇನ್‌ಸ್ಪೆಕ್ಟರ್ ಸಂಗಮೇಶ ಡಿಂಗಿನಾಳ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಗುಂಡು ಹಾರಿಸಿ, ಮತ್ತೊಂದು ಗುಂಡನ್ನು ಆರೋಪಿಯ ಎಡಗಾಲಿಗೆ ಹೊಡೆದಿದ್ದಾರೆ. ಗಾಯಾಳು ಆರೋಪಿಯನ್ನು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಕಿಮ್ಸ್‌ಗೆ ರವಾನಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.