ಕಾಸರಗೋಡಿನ ವಿವಾಹಿತೆ ಮೇಲೆ ಮಂಗಳೂರಿನ ಆಸ್ಪತ್ರೆಯಲ್ಲಿ ಅತ್ಯಾಚಾರ - ಯುವಕ ಅರೆಸ್ಟ್
Wednesday, May 29, 2024
ಮಂಗಳೂರು: ಕೇರಳ ರಾಜ್ಯದ ಕಾಸರಗೋಡು ಮೂಲದ ವಿವಾಹಿತೆಯನ್ನು ವಿವಾಹವಾಗುತ್ತೇನೆಂದು ನಂಬಿಸಿ ಅತ್ಯಾಚಾರ ಎಸಗಿರುವ ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಹೊಸದುರ್ಗ ತಾಲೂಕು ಪುಲ್ಲೂರು ಗ್ರಾಮದ ನಿವಾಸಿ ಸುಜಿತ್ ಬಂಧಿತ ಆರೋಪಿ.
32 ವರ್ಷದ ವಿವಾಹಿತೆ ಎರಡು ಮಕ್ಕಳ ತಾಯಿಯಾಗಿದ್ದು, ತನ್ನ ದೇಹ ಧಡೂತಿಯಾಗಿದೆ ಎಂದು ಜಿಮ್ ಗೆ ಹೋಗುತ್ತಿದ್ದಳು. ಅಲ್ಲಿ ಜಿಮ್ ತರಬೇತುದಾರ ಸುಜಿತ್ ಎಂಬಾತನೊಂದಿಗೆ ಗೆಳೆತನ ಬೆಳೆದಿದೆ. ಬಳಿಕ, ಮಹಿಳೆ ಫಿಸ್ತುಲಾ ರೋಗ ಬಾಧೆಗೆ ಒಳಗಾಗಿದ್ದು ಮಾರ್ಚ್ 13ರಂದು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಸ್ನೇಹಿತ ಸುಜಿತ್ ಆಕೆಯ ಸಹಕಾರಕ್ಕೆ ಬಂದಿದ್ದಾನೆ. ಅಲ್ಲದೆ ಜೊತೆಗೆ ಉಳಿದುಕೊಂಡಿದ್ದಾನೆ. ಈ ವೇಳೆ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆಂದು ಮಹಿಳೆ ದೂರು ನೀಡಿದ್ದಾರೆ.
ಈ ವೇಳೆ, ತನ್ನ ನಗ್ನ ಫೋಟೋಗಳನ್ನು ತೆಗೆದಿಟ್ಟು ಬೆದರಿಕೆ ಒಡ್ಡಿದ್ದಾನೆಂದು ಮಹಿಳೆ ಆರೋಪಿಸಿ ದೂರು ನೀಡಿದ್ದಾಳೆ. ಎಪ್ರಿಲ್ 4ರಿಂದ 8ರ ವರೆಗೆ ಮಹಾರಾಜಾ ರೆಸಿಡೆನ್ಸಿ ಹೊಟೇಲ್ ನಲ್ಲಿ ಅತ್ಯಾಚಾರ ಮಾಡಿದ್ದಾನೆ. ಅಲ್ಲಿದ್ದಾಗಲೇ ಮಹಿಳೆಗೆ ಫುಡ್ ಪಾಯಿಸನ್ ಆಗಿದ್ದು ಎಪ್ರಿಲ್ 8ರಿಂದ 10ರ ವರೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿಯೂ ಆರೋಪಿ ಸುಜಿತ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುತ್ತೇನೆಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದು ಪೊಲೀಸರು ಸೆಕ್ಷನ್ 376, 506 ಜೊತೆಗೆ 149 ಪ್ರಕಾರ ಕೇಸು ದಾಖಲಿಸಿದ್ದಾರೆ.