ಪ್ರಜ್ವಲ್ ರೇವಣ್ಣ ಏಳು ದಿನಗಳ ಕಾಲ ಎಸ್ಐಟಿ ವಶಕ್ಕೆ - ರೂಮ್ ನಲ್ಲಿ ವಾಸನೆ ಬರ್ತಿದೆ ಎಂದ ಹಾಸನ ಸಂಸದ
Friday, May 31, 2024
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣರನ್ನು ಜೂನ್ 6ರವರೆಗೆ ಅಂದರೆ ಏಳು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿ 42ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಪ್ರಜ್ವಲ್ ರೇವಣ್ಣರನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆತಂದಿದ್ದರು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲು ನ್ಯಾಯಾಲಯದ ಮುಂದೆ ಪ್ರಜ್ವಲ್‌ನನ್ನು ಹಾಜರುಪಡಿಸಿದ್ದರು. ಎಸ್‌ಐಟಿ ಪರ ವಕೀಲ ಎಸ್‌ಪಿಪಿ ಅಶೋಕ್ ವಾದ ಮಂಡಿಸಿ 15 ದಿನಗಳ ಕಾಲ ಅವರನ್ನು ಪೊಲೀಸ್ ವಶಕ್ಕೆ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಪ್ರಜ್ವಲ್ ಪರ ವಕೀಲ ವಾದ ಮಂಡಿಸಿ 1 ದಿನಗಳ ಕಾಲ ಮಾತ್ರ ಪೊಲೀಸ್ ವಶಕ್ಕೆ ನೀಡಬೇಕೆಂದು ಕೋರಿದರು. ವಾದ-ಪ್ರತಿವಾದವನ್ನು ಆಲಿಸಿದ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಶಿವಕುಮಾರ್ ಅವರು ಜೂನ್ 6ರವರೆಗೆ ಅಂದರೆ 7 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದರು.
ಇನ್ನೂ ಈ ಮಧ್ಯೆ ನ್ಯಾಯಾಧೀಶರು ಪ್ರಜ್ವಲ್‌ನ ಪ್ರಶ್ನಿಸಿ ಯಾವಾಗ ಅರೆಸ್ಟ್ ಮಾಡಿದ್ರು. ಏನಾದ್ರು ಸಮಸ್ಯೆ ಇದ್ಯಾ ಎಂದಾಗ ಏನೂ ಸಮಸ್ಯೆ ಇಲ್ಲ. ಆದ್ರೆ ಎಸ್‌ಐಟಿ ನೀಡಿರೋ ರೂಮ್‌ನಲ್ಲಿ ಕೆಟ್ಟ ವಾಸನೆ ಬರ್ತಿದೆ. ಅದೊಂದು ಸರಿ ಹೋದ್ರೆ ಏನೂ ಸಮಸ್ಯೆ ಇಲ್ಲ ಎಂದು ಪ್ರಜ್ವಲ್ ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾನೆ.