SSLC ಪಾಸಾದ ಬಾಲಕಿಯ ಹತ್ಯೆಗೈದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್ - Kodagu Girl Murder Case
ಕೊಡಗು: ನಿಶ್ಚಿತಾರ್ಥ ಮುಂದೂಡಿದ್ದಕ್ಕೆ ಕೋಪಗೊಂಡು 16 ವರ್ಷದ ಬಾಲಕಿಯನ್ನು ಭೀಕರವಾಗಿ ಕೊಲೆಗೈದು, ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್ನನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ಬಾಲಕಿಯ ಭೀಕರ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್ನನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಆರೋಪಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಸುಳ್ಳು ಸುದ್ದಿ ಶುಕ್ರವಾರ ವರದಿಯಾಗಿತ್ತು. ಆ ಬಳಿಕ ಈ ಕುರಿತ ಸುದ್ದಿ ಸುಳ್ಳು, ಆರೋಪಿಯ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಎಸ್ಪಿ ಪ್ರತಿಕ್ರಿಯೆ ನೀಡಿದ್ದರು.
ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಆರೋಪಿ ಬಂಧನದ ಫೋಟೋವನ್ನು ಕೂಡ ಬಿಡುಗಡೆಗೊಳಿಸಿದ್ದಾರೆ. ಆರೋಪಿಯ ಬಂಧನವಾಗಿದೆ. ಆದರೆ ಆತ ತೆಗೆದುಕೊಂಡ ಹೋಗಿದ್ದ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ.
ಕೊಲೆ ಪ್ರಕರಣದ ವಿವರ: ಆರೋಪಿ ಪ್ರಕಾಶ್ ಮತ್ತು ಬಾಲಕಿಯ ನಿಶ್ಚಿತಾರ್ಥ ಗುರುವಾರ ನಿಶ್ಚಯವಾಗಿತ್ತು. ಆದರೆ, ಬಾಲಕಿ ಅಪ್ರಾಪ್ತೆಯಾದ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆ ಬಳಿಕ ಎರಡೂ ಮನೆಯ ಪೋಷಕರು, ಬಾಲಕಿಗೆ 18 ವರ್ಷವಾದ ಬಳಿಕ ಪ್ರಕಾಶ್ ಜೊತೆ ಮದುವೆ ಮಾಡಲು ಒಪ್ಪಿಕೊಂಡಿದ್ದರು. ನಂತರ ಅಧಿಕಾರಿಗಳು ಮತ್ತು ಪ್ರಕಾಶ್ ಮನೆಯವರು ಬಾಲಕಿ ಮನೆಯಿಂದ ತೆರಳಿದ್ದರು.
ನಿಶ್ಚಿತಾರ್ಥ ಮುಂದೂಡಿದ್ದಕ್ಕೆ ಕೋಪಗೊಂಡಿದ್ದ ಪ್ರಕಾಶ್ ಗುರುವಾರ ಸಂಜೆ ಬಾಲಕಿಯ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ್ದ. ಬಾಲಕಿಯ ತಂದೆ ತಾಯಿ ಮೇಲೆ ಹಲ್ಲೆ ಮಾಡಿ, ಬಾಲಕಿಯನ್ನು ಮನೆಯಿಂದ ಎಳೆದೊಯ್ದಿದ್ದ. ನಂತರ ಹತ್ಯೆ ಮಾಡಿ, ಆಕೆಯ ತಲೆಯನ್ನು ತೆಗೆದುಕೊಂಡು ಪರಾರಿಯಾಗಿದ್ದ. ಆರೋಪಿಯ ಹಲ್ಲೆಯಿಂದ ಬಾಲಕಿಯ ತಂದೆ ತಾಯಿಯೂ ಗಾಯಗೊಂಡಿದ್ದರು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.
ಕೊಲೆಯಾದ ಬಾಲಕಿಯ ಎಸ್ಎಸ್ಎಲ್ಸಿ ಫಲಿತಾಂಶ ಗುರುವಾರವಷ್ಟೇ ಪ್ರಕಟವಾಗಿದ್ದು, ಉತ್ತಮ ಅಂಕದೊಂದಿಗೆ ಪಾಸಾಗಿದ್ದಳು. ಪರೀಕ್ಷೆ ಪಾಸಾದ ಖುಷಿಯಲ್ಲಿದ್ದಾಗಲೇ ಕೊಲೆಯಾಗಿದ್ದಳು.