ಮಂಗಳೂರು: ಕಂಟೈನರ್ ಲಾರಿಗೆ ಹಿಂದಿನಿಂದ ಗುದ್ದಿದ ಬಸ್ - ಚಾಲಕ ಸೇರಿ 15 ಮಂದಿಗೆ ಗಂಭೀರ ಗಾಯ
Wednesday, June 12, 2024
ಮಂಗಳೂರು: ರಸ್ತೆ ಗುಂಡಿ ಇದೆಯೆಂದು ಕಂಟೈನರ್ ಲಾರಿ ಹಠಾತ್ ಬ್ರೇಕ್ ಹಾಕಿರುವ ಪರಿಣಾಮ ಹೆಜಮಾಡಿ ಹೆದ್ದಾರಿಯಲ್ಲಿ ಸರಣಿ ಅಪಘಾತಕ್ಕೆ ಕಾರಣವಾಗಿದೆ. ಈ ಅಪಘಾತದಲ್ಲಿ ಕಂಟೈನರ್ ಹಿಂಭಾಗದಿಂದ ಅತಿ ವೇಗದಲ್ಲಿದ್ದ ಬಸ್ ಲಾರಿಗೆ ಡಿಕ್ಕಿಯಾಗಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬಸ್ ಮತ್ತು ಲಾರಿ ಪಡುಬಿದ್ರೆಯಿಂದ ಮಂಗಳೂರಿನತ್ತ ಬರುತ್ತಿತ್ತು. ಹೆದ್ದಾರಿಯಲ್ಲಿ ಹೆಜಮಾಡಿ ತಲುಪುತ್ತಿದ್ದಂತೆ ಮುಂಭಾಗದಲ್ಲಿ ದೊಡ್ಡ ಗುಂಡಿ ಬಿದ್ದಿರುವುದನ್ನು ನೋಡಿ ಲಾರಿ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಉಡುಪಿ- ಮಂಗಳೂರು ಎಕ್ಸ್‌ಪ್ರೆಸ್ ಬಸ್ ನೇರವಾಗಿ ಲಾರಿಗೆ ಡಿಕ್ಕಿಯಾಗಿದೆ. ಲಾರಿಗೆ ಗುದ್ದಿದ ರಭಸಕ್ಕೆ ಬಸ್ಸಿನ ಮುಂಭಾಗ ಪೂರ್ತಿ ಅಪ್ಪಚ್ಚಿಯಾಗಿದ್ದು ಲಾರಿಯ ಒಳಗೆ ಹೋಗಿತ್ತು.
ಬಸ್ಸಿನಲ್ಲಿದ್ದ ಚಾಲಕ ಸಹಿತ 15ಕ್ಕೂ ಅಧಿಕ ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ. ಪಡುಬಿದ್ರೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆದ್ದಾರಿ ಟೋಲ್ ವಸೂಲಿ ಮಾಡುವ ರಸ್ತೆಯಲ್ಲಿ ಗುಂಡಿ ಬಿದ್ದ ಪರಿಣಾಮ ಭೀಕರ ಅಪಘಾತವಾಗಿದ್ದು, ಅಮಾಯಕರು ಗಾಯಗೊಂಡಿದ್ದಾರೆ.