ಮಂಗಳೂರು: ಮನಪಾ ವ್ಯಾಪ್ತಿಯ ನಾರಾಯಣ ಗುರು ಮಂದಿರಕ್ಕೆ 15ಸಾವಿರ ಸಹಾಯಧನ - ಮೇಯರ್
Friday, June 28, 2024
ಮಂಗಳೂರು: ಮನಪಾ ವ್ಯಾಪ್ತಿಯ ನೋಂದಾಯಿತ ನಾರಾಯಣ ಗುರು ಮಂದಿರಗಳಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಿಸುವ ಸಲುವಾಗಿ ಈ ಬಾರಿ ಮನಪಾದಿಂದ 15ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಘೋಷಿಸಿದರು.
ಮನಪಾದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನಾರಾಯಣಗುರು ಜಯಂತಿ ಆಚರಣೆ ಬಳಿಕ ಮಂದಿರಗಳ ಆಡಳಿತ ಮಂಡಳಿ ಅದರ ಖರ್ಚು-ವೆಚ್ಚದ ವಿವರಗಳನ್ನು ಮನಾಪಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಈ ಸಹಾಯಧನ ನೀಡಲಾಗುತ್ತದೆ. ಇದಕ್ಕೆ ಬೇಕಾದ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದರು.
*ಎಸ್ಎಸ್ಎಲ್‌ಸಿಯಲ್ಲಿ 90%ಕ್ಕಿಂತಲೂ ಅಂಕಗಳಿಸಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಹಾಯಧನ*
ಮಂಗಳೂರು ಮನಪಾ ವ್ಯಾಪ್ತಿಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ 90%ಕ್ಕಿಂತಲೂ ಅಧಿಕ ಅಂಕಗಳಿಸಿರುವ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಈ ಬಾರಿಯಿಂದ ಸಹಾಯಧನ ನೀಡಲಾಗುತ್ತಿದೆ. ಇದಕ್ಕೆ ಬೇಕಾಗಿ ಬಜೆಟ್‌ನಲ್ಲಿ 5ಲಕ್ಷ ರೂ. ಹಣವನ್ನು ಮೀಸಲಿರಿಸಲಾಗಿದೆ. ಮನಪಾ ವ್ಯಾಪ್ತಿಯ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂಕಪಟ್ಟಿ, ಆಧಾರ್ ಕಾರ್ಡ್, ಪ್ರಾಂಶುಪಾಲರಿಂದ ಧೃಡೀಕರಣ ಪತ್ರದೊಂದಿಗೆ ಮೇಯರ್ ಅಥವಾ ತೆರಿಗೆ ಅಪೀಲು ಸ್ಥಾಯೀ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 31 ಆಗಿರುತ್ತದೆ ಎಂದರು.