15 ನಿಮಿಷ ತಡವಾಗಿ ಬರುವ ಕೇಂದ್ರ ನೌಕರರಿಗೆ ಅರ್ಧ ದಿನದ ಸಂಬಳ ಕಡಿತ!
ಹೊಸದಿಲ್ಲಿ: ಕೇಂದ್ರ ಸರಕಾರ ನೌಕರರು ಕೆಲಸಕ್ಕೆ ಬರುವುದು 15 ನಿಮಿಷ ಕ್ಕಿಂತ ಹೆಚ್ಚು ಸಮಯ ವಿಳಂಬವಾದಲ್ಲಿ ಅರ್ಧ ದಿನವನ್ನು ಸಾಮಾನ್ಯ ರಜೆಯಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.
ಇನ್ನು ಮುಂದೆ ಕೇಂದ್ರ ಸರಕಾರ ವ್ಯಾಪ್ತಿಯ ಎಲ್ಲಾ ಕಚೇರಿಯ ಸಿಬ್ಬಂದಿ ಬೆಳಗ್ಗೆ 9.15 ರೊಳಗೆ ಆಗಮಿಸಬೇಕು. ಬಯೋ ಮೆಟ್ರಿಕ್ ವ್ಯವಸ್ಥೆ ಮೂಲಕ ಹಾಜರಾತಿ ಹಾಕಬೇಕು. 15 ನಿಮಿಷಕ್ಕಿಂತ ಹೆಚ್ಚು ತಡವಾಗಿ ಬಂದಿದ್ದಲ್ಲಿ ಅಂತವರಿಗೆ ನೀಡಲಾಗಿ ರುವ ಸಾಮಾನ್ಯ ರಜೆಗಳಲ್ಲಿ ಅರ್ಧ ದಿನ ಕಡಿತಗೊಳಿಸಲಾಗುವುದು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ) ಆದೇಶಿಸಿದೆ.
ಯಾವುದೇ ಕಾರಣವಿದ್ದರೂ ಮಾಹಿತಿ ನೀಡದೆ ಗೈರು ಹಾಜರಾದರೆ ಅಂತಹ ಉದ್ಯೋಗಿಗಳ ಸಾಮಾನ್ಯ ರಜೆಯಲ್ಲಿ ಕಡಿತಗೊಳಿಸಲಾಗುವುದು. ಪೂರ್ವಾನು ಮತಿಯೊಂದಿಗೆ ರಜೆ ಪಡೆದುಕೊಂಡಿರ ಬೇಕು ಎಂದು ಸೂಚನೆ ನೀಡಿದೆ.
ಇನ್ನು ಮುಂದೆ ಪ್ರತಿಯೊಬ್ಬ ಉದ್ಯೋಗಿಯ ಹಾಜರಾತಿಯನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಲಾಗು ತ್ತದೆ. ತಡವಾಗಿ ಬಂದ ಸಿಬ್ಬಂದಿಗೆ ಶಿಕ್ಷೆಯ ರೂಪದಲ್ಲಿ ರಜೆ ಕಡಿತಗೊಳಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ.