ಕೆಲಸ ಕೊಡಿಸುವುದಾಗಿ ನಂಬಿಸಿ 200ಕ್ಕೂ ಅಧಿಕ ಯುವತಿಯರನ್ನು ಕೂಡಿಹಾಕಿ ತಂಡದಿಂದ ಅತ್ಯಾಚಾರ - ಈ ಗ್ಯಾಂಗ್‌ನ ಕುಕೃತ್ಯ ಒಂದೆರಡಲ್ಲ
Tuesday, June 18, 2024
ಪಟ್ನಾ: ಉದ್ಯೋಗ ಕೊಡಿಸುವುದಾಗಿ ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮಂದಿ ಯುವತಿಯರನ್ನು ಕೂಡಿಹಾಕಿ ಅವರ ಮೇಲೆ ನಿರಂತರ ಅತ್ಯಾಚಾರವೆಸಗಿರುವ ತಂಡದ ಕುಕೃತ್ಯವೊಂದು ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತ ಯುವತಿಯರನ್ನು ರಕ್ಷಿಸಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳು ಸಂತ್ರಸ್ತೆಯರಿಗೆ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಆರೋಪಿಗಳು 2022ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗದ ಜಾಹೀರಾತುಗಳನ್ನು ನೀಡಿ, ಮುಜಾಫರ್‌ಪುರಕ್ಕೆ ಭೇಟಿ ನೀಡುವಂತೆ ತಿಳಿಸಿದ್ದರು. ಇದನ್ನು ನೋಡಿ ಉದ್ಯೋಗಕ್ಕಾಗಿ ಬಂದ ಆಕಾಂಕ್ಷಿಗಳನ್ನು ಆರೋಪಿಗಳು ಕೋಣೆಯೊಂದರಲ್ಲಿ ಕೂಡಿ ಹಾಕುತ್ತಿದ್ದರು. ಅಲ್ಲಿಂದ ಅವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ.
ಬಳಿಕ ಆರೋಪಿಗಳು ತಿಂಗಳುಗಳಗಟ್ಟಲೇ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಗರ್ಭಪಾತ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಕೆಲವು ಯುವತಿಯರು ತಪ್ಪಿಸಿಕೊಂಡಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೊದಲಿಗೆ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ವಿನಿತಾ ಸಿನ್ಹಾ ತಿಳಿಸಿದ್ದಾರೆ.