ವಿಚ್ಛೇದಿತ 34ರ ಟೀಚರ್ ನೊಂದಿಗೆ 25ರ ಯುವಕನ ಲವ್ವಿಡವ್ವಿ - ಗರ್ಭಿಣಿಯಾಗಿಸಿ ಪರಾರಿ
Sunday, June 9, 2024
ಮೈಸೂರು: ವಿಚ್ಛೇದಿತೆಯಾಗಿದ್ದ 34ರ ಶಿಕ್ಷಕಿಯೊಂದಿಗೆ ಲವ್ವಿಡವ್ವಿ ನಡೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿ 25ರ ಯುವಕನೊಬ್ಬ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ತನ್ನನ್ನು ವಿವಾಹವಾಗುತ್ತೇನೆಂದು ನಂಬಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿದ್ದಾನೆ ಎಂದು ಮಹಿಳೆ ನೀಡಿರುವ ದೂರಿನ್ವಯ ಮೈಸೂರಿನ ಸರಸ್ವತಿಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಬೋಗಾದಿಯ ಬ್ಯಾಂಕರ್ಸ್ ಕಾಲನಿಯಲ್ಲಿ ವಾಸವಿದ್ದ 34 ವರ್ಷದ ಸಂತ್ರಸ್ತೆ ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಕಸ ಮಾಡುತ್ತಿದ್ದರು. ಇದೀಗ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಕೊಳ್ಳೇಗಾಲದ ತೇರಂಬಳ್ಳಿ ಗ್ರಾಮದ ಹರೀಶ (25) ಎಂಬಾತನ ವಿರುದ್ಧ ದೂರು ನೀಡಿದ್ದಾರೆ.
2018ರಲ್ಲಿ ಪತಿಯಿಂದ ವಿಚ್ಛೇದನ ಪಡೆದು ಸ್ವತಂತ್ರವಾಗಿ ಬದುಕುತ್ತಿರುವ ಈ ಶಿಕ್ಷಕಿಯ ಬಾಳಿನಲ್ಲಿ ಮತ್ತೊಬ್ಬ ಯುವಕ ಎಂಟ್ರಿಯಾಗಿದ್ದಾನೆ. ಮದುವೆಯಾಗುತ್ತೇನೆ ಎಂದು ನಂಬಿಸಿ ಗರ್ಭಿಣಿ ಮಾಡಿ ಇದೀಗ ಪರಾರಿಯಾಗಿದ್ದಾನೆ. ಮೈಸೂರಿನ ಖಾಸಗಿ ಕಂಪೆನಿಯಲ್ಲಿ ಈತ ಕೆಲಸ ಮಾಡುತ್ತಿದ್ದ. ಶಿಕ್ಷಕಿ ಹಾಗೂ ಯುವಕ ಇಬ್ಬರೂ ಹವ್ಯಾಸಿ ಹಾಡುಗಾರರಾಗಿದ್ದರು. ಸಿಂಗಿಂಗ್ ಇವೆಂಟ್ಸ್‌ಗಳಲ್ಲಿ ಹಾಡು ಹೇಳಲು ಹೋಗುತ್ತಿದ್ದಾಗ ಪರಸ್ಪರ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಆತ ಪ್ರೇಮಿಸುವಂತೆ ಹಿಂದೆ ಬಿದ್ದಿದ್ದ. ಕೊನೆಗೆ ಯುವಕನ ಒತ್ತಡಕ್ಕೆ ಮಣಿದ ಟೀಚರ್, ಆತನ ಪ್ರೀತಿಯನ್ನು ಒಪ್ಪಿದ್ದರಿಂದ ಮನೆಗೆ ಯುವಕ ಆಗಾಗ್ಗೆ ಬಂದು ಹೋಗುತ್ತಿದ್ದ.
ಮದ್ಯ ಕುಡಿಸಿ ನನ್ನ ಬಲವಂತವಾಗಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ. ನಂತರ ಆರೋಪಿ ಹರೀಶನ ಮನೆಯವರಿಂದ ಮದುವೆಗೆ ನಿರಾಕರಣೆ ಮಾಡಲಾಗಿದೆ. ನನ್ನ ಮೇಲೆ ಅತ್ಯಾಚಾರ ಮಾಡಿ ಈಗ ಎರಡು ತಿಂಗಳಿಂದ ಕಾಣೆಯಾಗಿದ್ದಾನೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಹಾಗಾಗಿ ನಾನು ಸರಸ್ವತಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ಪೊಲೀಸರಿಂದ ನನಗೆ ನ್ಯಾಯಸಿಗುವ ಭರವಸೆ ಇದೆ. ಆತ ನನ್ನನ್ನು ಮದುವೆಯಾದರೆ ಕೇಸ್ ವಾಪಸ್ ಪಡೆಯುತ್ತೇನೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಬಳಿ ನೊಂದ ಮಹಿಳೆ ಅಂಗಲಾಚಿದ್ದಾರೆ.