ಹತ್ಯೆ ಪ್ರಕರಣದಿಂದ ಬಚಾವಾಗಲು ನಟ ದರ್ಶನ್‌ಗೆ 40 ಲಕ್ಷ ನೀಡಿದ್ದ ಬಿಜೆಪಿ ಮುಖಂಡ - ಬಿಜೆಪಿ ಶಾಸಕರ ಆಪ್ತನ ವಿಚಾರಣೆಗೆ ಇಳಿದ ಪೊಲೀಸರು
Saturday, June 22, 2024
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪಾರಾಗಲು ನಟ ದರ್ಶನ್‌ಗೆ ಬರೋಬ್ಬರಿ 40 ಲಕ್ಷ ರೂ. ಹಣ ಸಾಲ ನೀಡಿದ್ದು ಬಿಜೆಪಿ ಶಾಸಕರೊಬ್ಬರ ಆಪ್ತ ರಾಮ್ ಮೋಹನ್ ರಾಜ್ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಇದೀಗ ಹಣ ಕೊಟ್ಟಿರುವ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮೇಯರ್ ರಾಮ್ ಮೋಹನ್‌ರಾಜ್‌ನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಕೊಲೆ ಪ್ರಕರಣದ ಆರೋಪಿ ದರ್ಶನ್ ವಿಚಾರಣೆ ವೇಳೆ, ಕೇಸ್‌ನಿಂದ ಪಾರಾಗಲು ಮೋಹನ್ ರಾಜ್ ಅವರಿಂದ 40 ಲಕ್ಷ ರೂ. ಸಾಲ ಪಡೆದು ಮನೆಯಲ್ಲಿಟ್ಟಿದ್ದೇನೆ ಎಂದು ಹೇಳಿದ್ದರು. ಈ ಹಣವನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. ಆರೋಪಿ ದರ್ಶನ್‌ಗೆ ಹಣ ಕೊಟ್ಟಿದ್ದು ನಿಜವೇ? ಯಾವ ಉದ್ದೇಶಕ್ಕಾಗಿ ಸಾಲ ನೀಡಲಾಗಿತ್ತು. ಆರೋಪಿ ಕೃತ್ಯದ ಬಗ್ಗೆ ಏನಾದರೂ ಚರ್ಚೆ ನಡೆಸಿದ್ದರೇ ಎಂಬುದು ಸೇರಿದಂತೆ ಹಲವು ವಿಚಾರಗಳನ್ನು ತಿಳಿಯಲು ಪೊಲೀಸರು ಮೋಹನ್ ಅವರನ್ನು ವಿಚಾರಣೆ ನಡೆಸಲಿದ್ದಾರೆ. ಶುಕ್ರವಾರ ನೋಟಿಸ್ ಜಾರಿಗೊಳಿಸಿದ್ದರೂ ಅವರು ವಿಚಾರಣೆಗೆ ಬಂದಿರಲಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
ಆರೋಪಿ ನಟ ದರ್ಶನ್, ವಿನಯ್ ಸೇರಿದಂತೆ ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆ ಪೊಲೀಸರು ನಡೆಸಿದ್ದಾರೆ. ದರ್ಶನ್ ಬಳಿ ಜಪ್ತಿ ಮಾಡಲಾಗಿರುವ ಹಣದ ಮೂಲ ಹಾಗೂ ಕೃತ್ಯದ ಬಗ್ಗೆ ಹಲವರನ್ನು ಸಂಪರ್ಕಿಸಿದ್ದ ಕುರಿತೂ ಸರಣಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿದ್ದಾರೆ. ಸಾಕ್ಷ್ಯನಾಶದ ಆರೋಪ ಹೊತ್ತಿರುವ ಪ್ರದೋಶ್, ಕರೆಂಟ್ ಶಾಕ್ ನೀಡಿರುವ ಧನರಾಜ್‌ನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಕೃತ್ಯದ ಸ್ಥಳಕ್ಕೆ ಭೇಟಿ ನೀಡಿದ್ದ ಇನ್ನೂ ಹಲವರ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ನಾಲ್ವರು ಆರೋಪಿಗಳ ಕಸ್ಟಡಿ ಅವಧಿ ಶನಿವಾರ ಮುಕ್ತಾಯವಾಗಲಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ದರ್ಶನ್ ಸೇರಿದಂತೆ ನಾಲ್ವರಿಗೆ ಜುಲೈ ನಾಲ್ಕರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.