ಮಂಗಳೂರು: ವ್ಯವಹಾರವೊಂದರಲ್ಲಿ ಹೂಡಿಕೆ ಮಾಡಿಸಿ ಬರೋಬ್ಬರಿ 65ಲಕ್ಷ ವಂಚನೆ - ಬ್ಯಾಂಕ್ ಮ್ಯಾನೇಜರ್ ಸೇರಿ ಇಬ್ಬರು ಅರೆಸ್ಟ್
Tuesday, June 11, 2024
ಮಂಗಳೂರು: ವ್ಯವಹಾರವೊಂದರಲ್ಲಿ ಹೂಡಿಕೆ ಮಾಡಿಸಿ ಬರೋಬ್ಬರಿ 65ಲಕ್ಷ ರೂ. ಹಣ ವಂಚನೆ ಮಾಡಿರುವ ಪ್ರಕರಣದಲ್ಲಿ ಖಾಸಗಿ ಬ್ಯಾಂಕ್‌ವೊಂದರ ಮ್ಯಾನೇಜರ್ ಸೇರಿದಂತೆ ಇಬ್ಬರ ಮೇಲೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕಂಪಾಡಿ ಕುಕ್ಕಾಡಿ ಕಾಂಪ್ಲೆಕ್ಸ್ ನಲ್ಲಿ ಮಳಿಗೆ ಹೊಂದಿರುವ ಶರೀಫ್ ಹಾಗೂ ಸುರತ್ಕಲ್ ನಲ್ಲಿರುವ ಖಾಸಗಿ ಬ್ಯಾಂಕ್ ಶಾಖೆಯ ಮ್ಯಾನೇಜರ್ ರಾಘವೇಂದ್ರ ಶೇಟ್ ಪ್ರಕರಣದ ಆರೋಪಿಗಳು.
ಹಣ ಕಳೆದುಕೊಂಡ ಪ್ರದೀಪ್ ಕುಮಾರ್ ಈ ಬಗ್ಗೆ ದೂರು ದಾಖಲಿಸಿದ್ದಾರೆ. ತಾನು ತನ್ನ ಪತ್ನಿಯೊಂದಿಗೆ ಸೇರಿ ಸುರತ್ಕಲ್ ನ ಖಾಸಗಿ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆದಿದ್ದೆ. ಅದೇ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ತನ್ನ ಪರಿಚಿತ ರಾಘವೇಂದ್ರ ಶೇಟ್ ಕುಕ್ಕಾಡಿಯ ಕಾಂಪ್ಲೆಕ್ಸ್‌ವೊಂದರ ಮಾಲಕ ಶರೀಫ್‌ನ ಪರಿಚಯ ಮಾಡಿಕೊಟ್ಟಿದ್ದರು. ಜೊತೆಗೆ ಬ್ಯಾಂಕ್‌ನಲ್ಲಿ ಹಣವನ್ನು ಠೇವಣಿ ಇಡುವ ಬದಲು ಶರೀಫ್ ರೊಂದಿಗೆ ಕೋಕ್ ಸರಬರಾಜು ವ್ಯವಹಾರದಲ್ಲಿ ಪಾಲುದಾರರಾಗಲು ಸೂಚಿಸಿದ್ದರು. ಅದರಂತೆ ತಾನು ಮತ್ತೊಂದು ಬ್ಯಾಂಕ್ ಖಾತೆಯಿಂದ 2022ರ ಜೂ.6ರಂದು 50 ಲಕ್ಷ ರೂ. ಗಳನ್ನು ಶರೀಫ್ ಖಾತೆಗೆ ವರ್ಗಾಯಿಸಿದ್ದೆ.
ಹಣದ ಭದ್ರತೆಗಾಗಿ ಅಬ್ದುಲ್ ಬಶೀರ್ ಎಂಬಾತನ ಹೆಸರಿನಲ್ಲಿರುವ ಸ್ಥಿರಾಸ್ಥಿಯನ್ನು ಸಾಲ ವ್ಯವಹಾರಕ್ಕಾಗಿ ಕರಾರು ಮಾಡಿಸಲಾಗಿತ್ತು. ಬಳಿಕ ಅ.17ರಂದು 15 ಲಕ್ಷ ರೂ. ಗಳನ್ನು ಮತ್ತೆ ಶರೀಫ್ ಖಾತೆಗೆ ವರ್ಗಾವಣೆ ಮಾಡಿದ್ದೆ. ಅದಕ್ಕೂ ಚೆಕ್ ಲೀಫ್ ಪಡೆಯಲಾಗಿದೆ. ಇದಾದ ಬಳಿಕ ಕರಾರಿನಂತೆ ಶರೀಫ್ ಹಣ ಹಿಂತಿರುಗಿಸಲು ವಿಫಲನಾಗಿದ್ದರಿಂದ ಆತ ಈ ಹಿಂದೆ ನೀಡಿದ ಚೆಕ್ಕನ್ನು ನಗದೀಕರಣಕ್ಕಾಗಿ ಬ್ಯಾಂಕಿಗೆ ಹಾಕಿದಾಗ ಚೆಕ್ ಬೌನ್ಸ್ ಆಗಿರುತ್ತದೆ.
ಹಣದ ಹೂಡಿಕೆ ವಿಚಾರದಲ್ಲಿ ಶರೀಫ್ 2ನೇ ಆರೋಪಿ ರಾಘವೇಂದ್ರನಿಗೆ ಕಮಿಷನ್ ಹಣ ಕೊಟ್ಟಿರುವುದಾಗಿ ತಿಳಿಸಿದ್ದಾನೆ. 2ನೇ ಆರೋಪಿ ರಾಘವೇಂದ್ರ ಶೇಟ್‌ನ ದುಷ್ಟೇರಣೆಯಂತೆ 1ನೇ ಆರೋಪಿ ಶರೀಫ್‌ನ ವ್ಯವಹಾರಕ್ಕೆ ಹಣ ತೊಡಗಿಸಿ ಬಳಿಕ ವಾಪಸ್ ನೀಡದೆ ವಂಚಿಸಿರುವುದಾಗಿ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಪ್ರದೀಪ್ ಕುಮಾರ್ ಎಲ್. ದೂರಿನಲ್ಲಿ ತಿಳಿಸಿದ್ದಾರೆ.