
ಸುಳ್ಯ: 800 ರೂಪಾಯಿಗಾಗಿ ಯುವಕನ ಕೊಲೆ
ಮಂಗಳೂರು: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು 800 ರೂಪಾಯಿಗಾಗಿ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಡಬ ತಾಲೂಕಿನ ಎಡಮಂಗಲದ ಉದಯ ಕುಮಾರ್ ನಾಯ್ಕ್ (35) ಬಂಧಿತ ಆರೋಪಿ. ರವಿವಾರ ರಾತ್ರಿ ವಿರಾಜಪೇಟೆಯ ವಸಂತ (45) ಎಂಬ ವ್ಯಕ್ತಿಯ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈಯಲಾಗಿತ್ತು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಉದಯ ಕುಮಾರ್ ಗೆ ಬಾರೊಂದರಲ್ಲಿ ವಸಂತ ಎಂಬಾತನ ಪರಿಚಯವಾಗಿದ್ದು, ರವಿವಾರ ರಾತ್ರಿ ಕಾಂತಮಂಗಲಕ್ಕೆ ಅಟೋ ರಿಕ್ಷಾದಲ್ಲಿ ಬಂದು ಶಾಲಾ ಜಗಲಿಯಲ್ಲಿ ಮಲಗಿದ್ದರು. ವಸಂತ ಎಂಬವರ ಬಳಿ 800 ರೂ. ಹಣ ಇರುವುದನ್ನು ಗಮನಿಸಿ ಉದಯ ಆತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ಕೊಲೆ ಮಾಡಿದ ಬಳಿಕ ಬೆಳಿಗ್ಗೆ ಹಣ ಹಾಗೂ ಮೊಬೈಲ್ ನೊಂದಿಗೆ ಅಲ್ಲಿಂದ ಪರಾರಿಯಾಗಿದ್ದರು. ತನಿಖೆಗಿಳಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯೂ ಮನೆಗೆ ತೆರಳದೇ ಎಲ್ಲಂದರಲ್ಲಿ ಇರುತ್ತಿದ್ದುದು ಬೆಳಕಿಗೆ ಬಂದಿತ್ತು.
ಎಸ್.ಪಿ.ರಿಷ್ಯಂತ್ ಸಿ.ಬಿ., ಎ.ಎಸ್.ಪಿ. ರಾಜೇಂದ್ರ ಡಿ.ಎಸ್., ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ ನೇತೃತ್ವದಲ್ಲಿ ಪುತ್ತೂರು ಇನ್ಸ್ ಪೆಕ್ಟರ್ ಸತೀಶ್ ಜೆ.ಜೆ., ಸುಳ್ಯ ಎಸೈ ಮಹೇಶ್, ಸುಬ್ರಹ್ಮಣ್ಯ ಎಸೈ ಕಾರ್ತಿಕ್, ಸಿಬ್ಬಂದಿಗಳಾದ ಉದಯ್ ಗೌಡ, ಪ್ರಕಾಶ್, ಉದಯ್, ಅನಿಲ್ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.