ಮಂಗಳೂರಿನ ಶ್ರೀಮಂತರನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಮೂವರ ಬಂಧನ
ಮಂಗಳೂರು: ಶ್ರೀಮಂತ ವ್ಯಕ್ತಿಗಳನ್ನು, ವ್ಯಾಪಾರಸ್ಥರನ್ನು ದರೋಡೆ ಮಾಡಲು ನಗರದ ಉಳ್ಳಾಲ ಮುಕ್ಕಚ್ಚೇರಿ ಪರಿಸರದಲ್ಲಿ ಸಂಚು ರೂಪಿಸುತ್ತಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಗರದ ಉಳ್ಳಾಲದ ಮುಹಮ್ಮದ್ ಸಮೀರ್ ಅಲಿ ಯಾನೆ ಕಡಪರ ಸಮೀರ್(33), ಮೊಹಮ್ಮದ್ ಮನ್ಸೂರ್ ಯಾನೆ ಬೋಳಿಯಾರು ಮನ್ಸೂರು(30), ಕೊಣಾಜೆಯ ಮುಹಮ್ಮದ್ ನೌಷಾದ್(30) ಬಂಧಿತ ಆರೋಪಿಗಳು.
ಈ ಹಿಂದೆ ಹತ್ಯೆ, ಹತ್ಯೆಯತ್ನ, ದರೋಡೆ, ಮಾದಕ ವಸ್ತು ಮಾರಾಟ ಹಾಗೂ ಇತರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ತಂಡವೊಂದು ಮಂಗಳೂರು ನಗರದ ಉಳ್ಳಾಲದ ಮುಕ್ಕಚ್ಚೇರಿ ಪರಿಸರದಲ್ಲಿ ಮಾರಾಕಾಯುಧಗಳಾದ ತಲವಾರುಗಳೊಂದಿಗೆ ಶ್ರೀಮಂತ ವ್ಯಕ್ತಿಗಳನ್ನು, ವ್ಯಾಪಾರಸ್ಥರನ್ನು ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಬಂಧಿತರಿಂದ ತಲವಾರು, ಚೂರಿ, ಮೊಬೈಲ್ ಫೋನುಗಳು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 25,90,000/- ಆಗಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಮುಹಮ್ಮದ್ ಸಮೀರ್ ಅಲಿ ಯಾನೆ ಕಡಪರ ಸಮೀರ್ ಎಂಬಾತನು ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಹತ್ಯೆ ಯತ್ನ, ಜೀವ ಬೆದರಿಕೆ ಪ್ರಕರಣ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಇಲ್ಯಾಸ್ ಹತ್ಯೆ ಪ್ರಕರಣ, ಫಳ್ನೀರ್ ನ ಶಾಪ್ ವೊಂದರಲ್ಲಿ ನಡೆದ ಶೂಟ್ಔಟ್ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಜೀವ ಬೆದರಿಕೆ ಪ್ರಕರಣ ಹೀಗೆ ಒಟ್ಟು 7 ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. ಇನ್ನೋರ್ವ ಆರೋಪಿ ಮುಹಮ್ಮದ್ ಮನ್ಸೂರ್ ಯಾನೆ ಬೋಳಿಯಾರ್ ಮನ್ಸೂರ್ ಎಂಬಾತನ ವಿರುದ್ಧ ಈ ಹಿಂದೆ ಕೊಣಾಜೆ ಠಾಣೆಯಲ್ಲಿ ದರೋಡೆ, ಹಲ್ಲೆ ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಫಳ್ನೀರ್ ಶೂಟ್ಔಟ್ ಪ್ರಕರಣ, ಹಾಗೂ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಭಾಗಿರುತ್ತಾನೆ. ಆರೋಪಿ ಮುಹಮ್ಮದ್ ನೌಷದ್ ಎಂಬಾತನು ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ಭಾಗಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.