ಮಂಗಳೂರು: ತುಳುನಾಡಿನ ದೈವ-ದೇವರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಮಾಡಿದ ಸಂಸದ ಬ್ರಿಜೇಶ್ ಚೌಟ - ತುಳುವಿನಲ್ಲೂ ಮಾತು
Monday, June 24, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೋಮವಾರ ಸಂಸತ್ತಿನಲ್ಲಿ ತುಳುನಾಡಿನ ದೈವ-ದೇವರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನದ ಕೊನೆಗೆ "ಮಾತೆರೆಗ್ಲಾ ಸೊಲ್ಮೆಲು" ಎಂದು ತುಳುಭಾಷೆಯಲ್ಲಿ ಧನ್ಯವಾದ ಹೇಳಿದ್ದಾರೆ.
ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಸೋಮವಾರ ಸಂಸತ್ತಿನ ಅಧಿವೇಶನದಲ್ಲಿ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಪ್ರಮಾಣ ವಚನದ ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ಬ್ರಿಜೇಶ್ ಚೌಟ ಬಿಳಿ ಅಂಗಿ ಮತ್ತು ಬಿಳಿ ಲುಂಗಿ ಧರಿಸಿ ತುಳುನಾಡಿನ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು. ಕತ್ತಿಗೆ ಕೇಸರಿ ಶಾಲನ್ನು ಧರಿಸಿದ್ದರು.
ಬ್ರಿಜೇಶ್ ಚೌಟ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡತನ ಮೆರೆದಿದ್ದಲ್ಲದೆ. ತಮ್ಮ ಮಾತೃಭಾಷೆಯಲ್ಲಿ "ಮಾತೆರೆಗ್ಲಾ ಸೊಲ್ಮೆಲು" (ಎಲ್ಲರಿಗೂ ಧನ್ಯವಾದಗಳು) ಎಂದು ತುಳುಭಾಷಾ ಪ್ರೇಮವನ್ನೂ ಮೆರೆದಿದ್ದಾರೆ. ಪ್ರಮಾಣ ವಚನವನ್ನು ತುಳುನಾಡಿನ ದೈವ ದೈವರುಗಳ ಹೆಸರಿನಲ್ಲಿ ಸ್ವೀಕರಿಸಿ ತುಳುನಾಡಿನ ದೇವತಾರಾಧನೆ ಹಾಗೂ ದೈವಾರಾಧನೆಯ ನಿಷ್ಠೆ ಪಾಲಿಸಿದ್ದಾರೆ. ತುಳುಭಾಷೆಯನ್ನು ಸಂಸತ್ತಿನಲ್ಲಿ ಮೊಳಗಿಸುವ ಮೂಲಕ ತುಳುವರಿಗೆ ಹೆಮ್ಮೆ ಮೂಡುವಂತೆ ಮಾಡಿದ ಬ್ರಿಜೇಶ್ ಚೌಟರು ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳುಭಾಷೆಯನ್ನು ಸೇರಿಸಲು ಪ್ರಯತ್ನಿಸುವರೇ ಎಂಬುದು ಕಾದು ನೋಡಬೇಕು.