ಮಂಗಳೂರು: ನಿಮ್ಮ ಮಕ್ಕಳನ್ನು ಬಂಧಿಸಿಸಲಾಗಿದೆ, ಬಿಡುಗಡೆಗೆ ಹಣ ಕೊಡಿ: ಪೊಲೀಸ್ ಹೆಸರಿನಲ್ಲಿ ಪಾಕಿಸ್ತಾನ, ಪೋಲೆಂಡ್‌ನಿಂದ ಕರೆ
Wednesday, June 12, 2024
ಮಂಗಳೂರು: ನಿಮ್ಮ ಮಕ್ಕಳನ್ನು ಬಂಧಿಸಿದ್ದೇವೆ. ಬಿಡುಗಡೆ ಮಾಡಬೇಕಾದರೆ ಹಣಕೊಡಿ ಎಂದು ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೆ ಕಳೆದೆರಡು ದಿನಗಳಿಂದ ವಾಟ್ಸ್ಆ್ಯಪ್ ಕರೆಗಳು ಬರುತ್ತಿದೆ. ಇದರಿಂದ ಭೀತರಾದ ವಿದ್ಯಾರ್ಥಿಗಳ ಪೋಷಕರು ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.
ಹೌದು... ಜೂನ್ 11 ಮತ್ತು 12 ರಂದು ಮಂಗಳೂರಿನ ವಿವಿಧ ಶಾಲಾ - ಕಾಲೇಜುಗಳಲ್ಲಿ ಕಲಿಯುತ್ತಿರುವ ಹಲವಾರು ವಿದ್ಯಾರ್ಥಿಗಳ ಪೋಷಕರಿಗೆ ಈ ರೀತಿಯ ಬೆದರಿಕೆ ಕರೆಗಳು ಬಂದಿವೆ. ವಾಟ್ಸ್ಆ್ಯಪ್ ಮೂಲಕವೇ ಈ ಕರೆಗಳು ಬರುತ್ತಿದೆ. ಪೋಲೆಂಡ್ ಮತ್ತು ಪಾಕಿಸ್ತಾನದಂತಹ ವಿದೇಶಿ ಸಂಖ್ಯೆಗಳಿಂದ ಈ ಕರೆಗಳು ಬರುತ್ತಿವೆ ಎಂದು ಅಂದಾಜಿಸಲಾಗಿದೆ.
ಕರೆ ಮಾಡಿರುವ ವ್ಯಕ್ತಿ ತನ್ನನ್ನು ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿ ಹಿಂದಿಯಲ್ಲಿ ಮಾತನಾಡಿದ್ದಾನೆ. ಆಯಾ ಪೋಷಕರಿಗೆ ತಮ್ಮ ಪುತ್ರ / ಪುತ್ರಿಯನ್ನು ಬಂಧಿಸಲಾಗಿದೆ. ಅವರನ್ನು ಬಿಡುಗಡೆ ಮಾಡಬೇಕಾದರೆ ಹಣ ಕೊಡುವಂತೆ ಒತ್ತಾಯಿಸಿದ್ದಾರೆ ಎಂದು ದೂರು ಬಂದಿದೆ.
ಈ ಕರೆಗಳನ್ನು ಶಾಲಾ ಅವಧಿಯಲ್ಲಿ ಮಾಡಲಾಗಿದ್ದು, ಪೋಷಕರಿಂದ ಬೆದರಿಸಿ ಹಣ ವಸೂಲಿ ಮಾಡಲಾಗಿತ್ತು. ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿದಾಗ ಈ ಕರೆಗಳು ಎಲ್ಲವೂ ನಕಲಿಯಾಗಿದೆ ಮತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಈ ಬಗ್ಗೆ ಹಲವಾರು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ