ಹುಟ್ಟುಹಬ್ಬ ಮುಗಿಸಿ ಮರಳುತ್ತಿದ್ದವರ ಕಾರಿಗೆ ಮುಖಾಮುಖಿ ಬೊಲೆರೋ ಡಿಕ್ಕಿ: ನಾಲ್ವರು ಯೂಟ್ಯೂಬರ್ ಗಳು ದುರ್ಮರಣ
Monday, June 10, 2024
ಲಖನೌ: ಎರಡು ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ನಾಲ್ವರು ಯೂಟ್ಯೂಬರ್ ಗಳು ದುರಂತವಾಗಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಕ್ಕಿ, ಸಲ್ಮಾನ್, ಶಾರುಖ್ ಮತ್ತು ಶಹನವಾಜ್ ಮೃತಪಟ್ಟ ದುರ್ದೈವಿಗಳು.
ಇವರು ರೌಂಡ್ 2 ವರ್ಲ್ಡ್ (Round 2 World ) ಎಂಬ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಮಿಡಿ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಈ ಮೂಲಕ ಇವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುತ್ತಿದ್ದರು.
ಇವರು ಹುಟ್ಟುಹಬ್ಬ ಕಾರ್ಯಕ್ರಮ ಮುಗಿಸಿ ಮನೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮುಂಭಾಗದಿಂದ ಬರುತ್ತಿದ್ದ ಬೊಲೆರೊ ಕಾರಿಗೆ ಯೂಟ್ಯೂಬರ್ಸ್ ಇದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರೂ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಜನರು, ಯುವಕರನ್ನು ಸಿಎಚ್‌ಸಿ ಗಜರೌಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಅದ್ರೋಹಾ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದ್ದು, ಅಪಘಾತದ ಸ್ಥಳವನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.