ಇರ್ಫಾನ್ ಪಠಾಣ್ ಮೇಕಪ್ ಆರ್ಟಿಸ್ಟ್ ವೆಸ್ಟ್ ಇಂಡೀಸ್ ಹೊಟೇಲ್‌ನ ಈಜುಕೊಳದಲ್ಲಿ ಮುಳುಗಿ ಮೃತ್ಯು
Monday, June 24, 2024
ಆ್ಯಂಟಿಗುವಾ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಅವರ ಮೇಕಪ್ ಆರ್ಟಿಸ್ಟ್ ಫಯಾಝ್ ಅನ್ಸಾರಿ ಶುಕ್ರವಾರ ವೆಸ್ಟ್ ಇಂಡೀಸ್‌ನ ಹೋಟೆಲೊಂದರ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಬಾರಿಯ ಟಿ-20 ವಿಶ್ವಕಪ್ ಪಂದ್ಯಗಳು ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ನಡೆಯುತ್ತಿವೆ. ಈ ಪೈಕಿ ಸೂಪರ್ 8ರ ಘಟ್ಟದ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿದೆ. ಈ ಟೂರ್ನಮೆಂಟ್‌ನ ವೀಕ್ಷಕ ವಿವರಣೆಗಾರನಾಗಿ ಇರ್ಫಾನ್ ಪಠಾಣ್ ಅವರು ವೆಸ್ಟ್ ಇಂಡೀಸ್‌ಗೆ ತೆರಳಿದ್ದರು. ಈ ವೇಳೆ ತಮ್ಮೊಂದಿಗೆ ಮೇಕಪ್ ಆರ್ಟಿಸ್ಟ್ ಫಯಾಝ್ ಅನ್ಸಾರಿಯವರನ್ನೂ ಕರೆದೊಯ್ದಿದ್ದರು.
ವೆಸ್ಟ್ ಇಂಡೀಸ್‌ನ ಹೋಟೆಲೊಂದರಲ್ಲಿ ವಾಸ್ತವ್ಯ ಹೂಡಿದ್ದ ಫಯಾಝ್ ಅನ್ಸಾರಿ, ಶುಕ್ರವಾರ ಸಂಜೆ ಹೋಟೆಲ್‌ನ ಈಜುಕೊಳದಲ್ಲಿ ಈಜುತ್ತಿರುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿಪ್ಪಿದ್ದಾರೆ ಎಂದು ಹೇಳಲಾಗಿದೆ. 22 ವರ್ಷದ ಫಯಾಝ್ ಅನ್ಸಾರಿ ಪಶ್ಚಿಮ ಬಂಗಾಳದ ಬಿಳ್ಳೂರ್ ಜಿಲ್ಲೆಯ ನಾಗಿನ ತಾಲ್ಲೂಕಿನ ಮೊಹಲ್ಲಾ ಖಾಝಿ ಸರಾಯಿ ಗ್ರಾಮದ ನಿವಾಸಿ. ಮುಂಬೈನಲ್ಲಿ ಅನ್ಸಾರಿ, ಕ್ಷೌರದ ಅಂಗಡಿ ತೆರೆದಿದ್ದರು. ಇರ್ಫಾನ್ ಪಠಾಣ್ ಮೇಕಪ್‌ಗೆಂದು ಇವರದ್ದೇ ಕ್ಷೌರದ ಅಂಗಡಿಗೆ ಭೇಟಿ ನೀಡುತ್ತಿದ್ದರು. ಬಳಿಕ ಅನ್ಸಾರಿಯನ್ನು ತಮ್ಮ ಖಾಸಗಿ ಮೇಕಪ್ ಕಲಾವಿದರನ್ನಾಗಿಸಿಕೊಂಡಿದ್ದ ಇರ್ಫಾನ್ ಪಠಾಣ್, ಅವರನ್ನು ತಮ್ಮೊಂದಿಗೆ ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಕರೆದೊಯ್ಯುತ್ತಿದ್ದರು ಎಂದು ಹೇಳಲಾಗಿದೆ.
ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಫಯಾಝ್ ಅನ್ಸಾರಿ, ಎಂಟು ದಿನಗಳ ಹಿಂದಷ್ಟೆ ತಮ್ಮ ಸ್ವಗ್ರಾಮದಿಂದ ಮುಂಬೈಗೆ ತೆರಳಿದ್ದರು ಎನ್ನಲಾಗಿದೆ. ಈ ಅನಿರೀಕ್ಷಿತ ಅಪಘಾತದಿಂದ ಅವರ ಕುಟುಂಬವು ದುಃಖತಪ್ತವಾಗಿದೆ. ಫಯಾಝ್ ಅನ್ಸಾರಿಯ ಮೃತದೇಹವನ್ನು ಭಾರತಕ್ಕೆ ರವಾನಿಸುವ ವ್ಯವಸ್ಥೆಯ ಉಸ್ತುವಾರಿಯನ್ನು ಇರ್ಫಾನ್ ಪಠಾಣ್ ಅವರೇ ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.