ಬಾಲಕನ ಕಾಲಿನ ಬದಲು ಖಾಸಗಿ ಅಂಗಕ್ಕೆ ಚಿಕಿತ್ಸೆ ಮಾಡಿದ ವೈದ್ಯರು
Sunday, June 30, 2024
ಮುಂಬೈ: ಬಾಲಕನೊಬ್ಬನ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ವೈದ್ಯರು ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಎಡವಟ್ಟು ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ವೈದ್ಯರ ಈ ನಿರ್ಲಕ್ಷ್ಯಕ್ಕೆ ಬಹಳಷ್ಟು ಮಂದಿ ಕಿಡಿಕಾರಿದ್ದಾರೆ. ಈ ಬಗ್ಗೆ ಬಾಲಕನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ವಿಚಾರಣೆ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಗುವಿನ ಪೋಷಕರು, ಕಳೆದ ತಿಂಗಳು ತಮ್ಮ ಮಗ ಆಟವಾಡಲು ಹೋಗಿದ್ದಾಗ ಬಿದ್ದು ಗಾಯ ಮಾಡಿಕೊಂಡಿದ್ದ. ಆಸ್ಪತ್ರೆಯಲ್ಲಿ ತೋರಿಸಿದಾಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸೂಚಿಸಿದರು. ಅದರಂತೆ ಶಸ್ತ್ರಚಿಕಿತ್ಸೆ ನಡೆದಿದೆ. ಚಿಕಿತ್ಸೆಯ ಬಳಿಕ ಪರಿಶೀಲಿಸಿದಾಗ ಕಾಲಿನ ಬದಲು ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಈ ವಿಚಾರವನ್ನು ವೈದ್ಯರ ಗಮನಕ್ಕೆ ತರಲಾಗಿದ್ದು, ಅವರು ವಿಚಾರವನ್ನು ಅರಿತುಕೊಂಡ ನಂತರ ಕಾಲಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾರಿಗೂ ಈ ರೀತಿಯಾಗದಂತೆ ಕ್ರಮ ವಹಿಸಲಾಗುವುದು. ಮಗುವಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.