ಮಂಗಳೂರು: ಗೋಲ್ಡ್ ಪಿಂಚ್ ಕೆ.ಪ್ರಕಾಶ್ ಶೆಟ್ಟಿ, ಡಾ.ರೊನಾಲ್ಡ್ ಕೊಲಾಸೊ, ಡಾ.ತುಂಬೆ ಮೊಯ್ದೀನ್‌ಗೆ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್
Friday, June 14, 2024
ಮಂಗಳೂರು: ಮಂಗಳೂರು ವಿವಿಯು ಈ ಬಾರಿ ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಜೂ 15ರಂದು ನಡೆಯುವ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೋಲ್ಡ್ ಪಿಂಚ್ ಕೆ.ಪ್ರಕಾಶ್ ಶೆಟ್ಟಿ, ಡಾ.ರೊನಾಲ್ಡ್ ಕೊಲಾಸೊ, ಡಾ.ತುಂಬೆ ಮೊಯ್ದೀನ್ ಅವರಿಗೆ ಈ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
ಈ ಬಗ್ಗೆ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಮಂಗಳೂರು ವಿವಿಯ ಕುಲಪತಿ ಡಾ.ಪಿ.ಎಲ್ ಧರ್ಮ ಮಾಹಿತಿ ನೀಡಿ, ಈ ಬಾರಿ ಗೌರವ ಡಾಕ್ಟರೇಟ್‌ಗೆ 12 ಪ್ರಸ್ತಾವಗಳು ಬಂದಿತ್ತು. ಈ ಪ್ರಸ್ತಾವನೆಯನ್ನು ಸಿಂಡಿಕೆಟ್ ಸಭೆಯಲ್ಲಿ ಇರಿಸಿ ನಿರ್ಣಯ ಮಂಡಿಸಿ ಕುಲಾಧಿಪತಿಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿಂದಲೇ ಅಂತಿಮವಾಗಿ ಮೂರಿ ಹೆಸರುಗಳನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಿದ್ದಾರೆ ಎಂದು ಹೇಳಿದರು.
ಘಟಿಕೋತ್ಸವದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ, ಮಹಾ ನಿರ್ದೇಶಕ ಪ್ರೊ. ಸಚಿನ್ ಚತುರ್ವೇದಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ. ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿರುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದರು.
ಈ ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 155 ಮಂದಿಗೆ ಪಿಹೆಚ್.ಡಿ ಡಾಕ್ಟರೇಟ್ ಪದವಿ(ಕಲೆ -51, ವಿಜ್ಞಾನ -73. ವಾಣಿಜ್ಯ-26, ಶಿಕ್ಷಣ -05) ಪ್ರದಾನ ಮಾಡಲಾಗುವುದು. ಇವರಲ್ಲಿ 60(38.70%) ಮಹಿಳೆಯರು ಮತ್ತು 95(61.29%) ಪುರುಷರು ಆಗಿದ್ದಾರೆ. ಈ ಬಾರಿ 18 ಅಂತರಾಷ್ಟ್ರೀಯ ಪುರುಷ ವಿದ್ಯಾರ್ಥಿಗಳು ಹಾಗೂ 04 ಅಂತರಾಷ್ಟ್ರೀಯ ಮಹಿಳಾ ವಿದ್ಯಾರ್ಥಿಗಳು ಪಿ.ಹೆಚ್.ಡಿ ಪದವಿ ಪಡೆಯಲಿರುವರು. ಇವರಲ್ಲಿ ಅಫ್ಘಾನಿಸ್ತಾನದ 6, ತಾಂಜೇನಿಯಾದ 2, ನೈಜಿರಿಯಾದ 1, ಇಥಿಯೋಪಿಯದ 9, ಕ್ರುವೆಶಿಯದ 1, ಇರಾಕ್ ಮೂರು ವಿದ್ಯಾರ್ಥಿಗಳಿದ್ದಾರೆ ಎಂದರು.
58 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಕೋರ್ಸ್ ಗಳ ಒಟ್ಟು 168 ರ‌್ಯಾಂಕ್‌ಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದ 72 ಮಂದಿಗೆ ರ‌್ಯಾಂಕ್ ಪ್ರಮಾಣ ಪತ್ರ(ಸ್ನಾತಕೋತ್ತರ ಪದವಿ - 52 ಮತ್ತು ಪದವಿ - 20, ಕಲೆ - 31. ವಿಜ್ಞಾನ ಮತ್ತು ತಂತ್ರಜ್ಞಾನ -75, ವಾಣಿಜ್ಯ - 41, ಶಿಕ್ಷಣ 21) ನೀಡಲಾಗುವುದು ಎಂದರು.