ಸುಳ್ಯ: ಹತ್ತಿರ ಸುಳಿದ ಮದ್ಯಪಾನಿಯನ್ನು ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ
Wednesday, June 26, 2024
ಸುಳ್ಯ: ಹತ್ತಿರ ಸುಳಿದ ಮದ್ಯದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆನೆ ಎತ್ತಿ ಎಸೆದ ಘಟನೆ ನಡೆದಿದೆ. ಇದರ ವೀಡಿಯೋ ಈಗ ವೈರಲ್ ಆಗಿದೆ.
ಕುಕ್ಕೆ ಶ್ರೀಸುಬ್ರಮಣ್ಯ ದೇವಸ್ಥಾನದ ಆನೆ ಯಶಸ್ವಿನಿಯನ್ನು ಮಾವುತ ನಿಭಾಯಿಸುತ್ತಿದ್ದರು. ಪೊಲೀಸರು ಸೇರಿದಂತೆ ಒಂದಿಬ್ಬರು ಅದರ ಬಳಿ ಬಂದರೂ ಆನೆ ಏನೂ ಮಾಡಿರಲಿಲ್ಲ. ಆದರೆ ಅದೇ ವೇಳೆ ವ್ಯಕ್ತಿಯೊಬ್ಬ ಹಾಯ್ದು ಹೋಗುತ್ತಿದ್ದಂತೆ ಆನೆ ಸೊಂಡಿಲಿನಲ್ಲಿ ಎತ್ತಿ ಎಸೆದಿದೆ. ಆನೆ ಎಸೆಯುತ್ತಿದ್ದಂತೆ ಆತ ಒಂದಷ್ಟು ದೂರಕ್ಕೆ ಹೋಗಿ ಬಿದ್ದಿದ್ದಾನೆ. ಈ ವೇಳೆ ಮಾವುತ "ಮದ್ಯಪಾನ ಮಾಡಿ ಯಾಕೆ ಆನೆಯ ಹತ್ತಿರ ಬರುತ್ತೀರಾ?" ಎಂದು ದಬಾಯಿಸುವುದು ವೀಡಿಯೋದಲ್ಲಿ ಕೇಳುತ್ತದೆ.
ಯಶಸ್ವಿನಿ ಆನೆಗೆ ಮದ್ಯದ ವಾಸನೆ ಆಗುವುದಿಲ್ಲವಂತೆ. ಮದ್ಯಪಾನಿಗಳು ಅದರ ಹತ್ತಿರ ಸುಳಿದಾಡಿದರೆ ಎತ್ತಿ ಎಸೆಯುತ್ತದೆಯಂತೆ. ಈ ಹಿಂದೆಯೂ ಇದೇ ರೀತಿ ಮದ್ಯಸೇವನೆ ಮಾಡಿದವನನ್ನು ಆನೆ ಎತ್ತಿ ಎಸೆದಿರುವ ಘಟನೆ ನಡೆದಿತ್ತು.