ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ, ಬಿಜೆಪಿ ನೂತನ ಸಂಸದೆ ಕಂಗನಾ ರನೌತ್ ಗೆ ಕೆನ್ನೆಗೆ ಬಾರಿಸಿದ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿ
Friday, June 7, 2024
ಚಂಡೀಗಢ: ಬಾಲಿವುಡ್ ನಟಿ, ಬಿಜೆಪಿಯ ನೂತನ ಸಂಸದೆ ಕಂಗನಾ ರನೌತ್ ಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.
ಸಂಸದೆಯಾದ ಬಳಿಕ ಕಂಗನಾ ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದು ತಪಾಸಣೆಗೆ ಒಳಗಾಗುತ್ತಿದ್ದರು. ಈ ವೇಳೆ ಮಹಿಳಾ ಸೆಕ್ಯುರಿಟಿ ಸಿಬ್ಬಂದಿ ಕುಲ್ವಿಂದರ್ ಸಿಂಗ್ ಮಾತಿಗೆ ಮಾತು ಬೆಳೆಸಿ ಕಂಗನಾ ಕೆನ್ನೆಗೆ ಬಾರಿಸಿದ್ದಾರೆ. ಪಂಜಾಬ್ ನಲ್ಲಿ ರೈತರ ಪ್ರತಿಭಟನೆ ವಿಚಾರದಲ್ಲಿ ಕಂಗನಾ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕುಲ್ವಿಂದರ್ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ತಕ್ಷಣವೇ ಹಲ್ಲೆಗೈದ ಸಿಬ್ಬಂದಿಯನ್ನು ಅಮಾನತು ಮಾಡಿದ್ದು, ಘಟನೆ ಬಗ್ಗೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಕಂಗನಾ ಈ ಬಗ್ಗೆ ವಿಡಿಯೋ ಮಾಡಿ ಟ್ವಿಟ್ ಮಾಡಿದ್ದು, ಪಂಜಾಬಿನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ಹೇಗೆ ನಿಯಂತ್ರಣ ಮಾಡೋದು ಎಂದು ಪ್ರಶ್ನೆ ಮಾಡಿದ್ದಾರೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಚೆಕ್ ಮಾಡುತ್ತಿದ್ದಾಗ ಘಟನೆ ನಡೆದಿದೆ. ಮಹಿಳಾ ಸಿಬ್ಬಂದಿಯಿಂದ ತಪಾಸಣೆಗೆ ಕಾಯುತ್ತಿದ್ದಾಗಲೇ ಒಬ್ಬಾಕೆ ಬಂದು ಹಲ್ಲೆ ನಡೆಸಿದ್ದಾಳೆ. ನನ್ನನ್ನು ತುಚ್ಛವಾಗಿ ನಿಂದಿಸಿದ್ದಾಳೆ. ಪ್ರಶ್ನೆ ಮಾಡಿದ್ದಕ್ಕೆ ನಾನು ಪಂಜಾಬಿ ರೈತರ ಪರವಾಗಿದ್ದೇನೆ ಎಂದು ಆಕೆ ತಿಳಿಸಿದ್ದಾಳೆ. ನಾನು ಸ್ವಸ್ಥಳಿದ್ದೇನೆ. ಆದರೆ ಪ್ರಶ್ನೆ ಇರುವುದು, ಪಂಜಾಬಿನಲ್ಲಿ ಬೆಳೆಯುತ್ತಿರುವ ಈ ರೀತಿಯ ಆತಂಕವಾದ ಮತ್ತು ಅಲ್ಲಿನ ಜನರಲ್ಲಿ ಹಿಂಸೆಯ ಬಗ್ಗೆ ಎಂದು ಹೇಳಿದ್ದಾರೆ.
ಇದೇ ವೇಳೆ, ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಹಲ್ಲೆಗೈದ ಮಹಿಳಾ ಸಿಬ್ಬಂದಿ, ತನ್ನ ತಾಯಿಯೂ ಅಂದು ರೈತರ ಪ್ರತಿಭಟನೆಯಲ್ಲಿದ್ದರು. ಅದಕ್ಕಾಗಿ ಸಿಟ್ಟು ಇತ್ತು ಎಂಬ ಮಾತನ್ನು ಹೇಳುತ್ತಿದ್ದಾಳೆ. ಆಕೆಯನ್ನು ಕೂಡಲೇ ಹಿರಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿಗೆ ತೆರಳಿದ ಬಳಿಕ ಕಂಗನಾ ರನೌತ್ ಅವರು ಸಿಐಎಸ್‌ಎಫ್ ಡಿಜಿ ನೈನಾ ಸಿಂಗ್ ಮತ್ತಿತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದು, ಘಟನೆಯ ಬಗ್ಗೆ ವಿವರಿಸಿದ್ದಾರೆ. ಕಂಗನಾ ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.