ಕಾಸರಗೋಡು: ಭಾರೀ ಮಳೆಗೆ ಶ್ರೀಮಧೂರು ದೇವಸ್ಥಾನ ಜಲಾವೃತ
Thursday, June 27, 2024
ಕಾಸರಗೋಡು: ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.
ನಿನ್ನೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಧೂರು ದೇವಸ್ಥಾನ ಬಳಿಯ ಮಧುವಾಹಿನಿ ನದಿ ತುಂಬಿ ಹರಿಯುತ್ತಿದ್ದು, ದೇವಸ್ಥಾನದ ಒಳಗೂ ನುಗ್ಗಿದೆ. ದೇವಸ್ಥಾನದ ಪ್ರಾಂಗಣದಲ್ಲಿ ನಾಲ್ಕೈದು ಅಡಿ ನೀರು ಏರಿ ಸಂಪೂರ್ಣ ಕೆರೆಯಂತೆ ಭಾಸವಾಗುತ್ತಿದೆ. ದೇವಸ್ಥಾನ ಸುತ್ತಲೂ ಸಂಪೂರ್ಣ ಜಲಾವೃತವಾಗಿದ್ದು ದ್ವೀಪದಂತೆ ಗೋಚರಿಸುತ್ತಿದೆ.
ಪುರೋಹಿತರುಗಳು ನೀರಿನಲ್ಲಿಯೇ ನಿಂತು ದೇವರಿಗೆ ಪೂಜೆ ಸಲ್ಲಿಸುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತಿದೆ. ಅಲ್ಲದೆ ದೇವಸ್ಥಾನದ ಅಡುಗೆಕೋಣೆಯಲ್ಲಿರುವ ಪಾತ್ರೆಗಳು ನೀರಿನಲ್ಲಿ ಚೆಲ್ಲಾಪಿಲ್ಲಿಯಾಗಿರುವುದೂ ದೃಶ್ಯದಲ್ಲಿ ಚಿತ್ರಿತವಾಗಿದೆ. ದೇವಸ್ಥಾನದ ರಸ್ತೆಯೂ, ಹೊರಭಾಗದಲ್ಲೂ ಸಂಪೂರ್ಣ ನೀರುಮಯವಾಗಿದ್ದು, ಜನರು ನೀರಿನಲ್ಲಿ ಓಡಾಟ ಮಾಡುತ್ತಿರುವುದು ನೋಡಬಹುದು.