ಮೊಸಳೆಯೊಂದಿಗೆ ಕಾದಾಡಿ ಕೈಕಳೆದುಕೊಂಡ ಬಾಲಕನಿಗೆ ಆಸ್ಪತ್ರೆಯಲ್ಲಿ ಬೆಂಚ್ ನಲ್ಲಿ ಮಲಗಿಸಿ ಚಿಕಿತ್ಸೆ - ವೀಡಿಯೋ ವೈರಲ್
Sunday, June 30, 2024
ಲಖನೌ: ಮೊಸಳೆ ದಾಳಿಗೆ ತುತ್ತಾಗಿ ಕೈಯನ್ನೇ ಕಳೆದುಕೊಂಡಿರುವ ಬಾಲಕನಿಗೆ ಆಸ್ಪತ್ರೆಯ ಬೆಂಚ್ ಮೇಲೆ ಮಲಗಿಸಿ ವೈದ್ಯರು ಚಿಕಿತ್ಸೆ ನೀಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿನ ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶ ರಾಜ್ಯಸರ್ಕಾರದ ವಿರುದ್ಧ ಜನರುವಿದೀಗ ಕಿಡಿಕಾರುತ್ತಿದ್ದಾರೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಸಂಕಿತ್ ಕುಮಾರ್ (11) ತನ್ನ ತಾಯಿಯೊಂದಿಗೆ ದನಗಳಿಗೆ ಮೇವು ತರಲೆಂದು ಗ್ರಾಮದ ಹೊರವಲಯದಲ್ಲಿರುವ ಕೆರೆಯ ಬಳಿ ತೆರಳಿದ್ದನು. ಈ ವೇಳೆ ಮೊಸಳೆಯೊಂದು ಆತನ ಮೇಲೆ ದಾಳಿ ಮಾಡಿದ್ದು, ಇದನ್ನು ನೋಡಿದ ಆತನ ತಾಯಿ ಜೋರಾಗಿ ಕೂಗಿಕೊಂಡಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಕೋಲಿನಿಂದ ಮೊಸಳೆಯನ್ನು ಹೊಡೆದಿದ್ದಾರೆ. ತಾಯಿಯ ಕೂಗಾಟ ಕೇಳಿ ಸ್ಥಳಕ್ಕೆ ದೌಢಾಯಿಸಿದ ಗ್ರಾಮಸ್ಥರು ಮೊಸಳೆಯ ದವಡೆಯಿಂದ ಬಾಲಕನನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಾಗಲೇ ಅವನ ಕೈಯನ್ನು ಮೊಸಳೆ ತಿಂದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಆತನಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಬದಲು ಬೆಂಚ್ ಮೇಲೆ ಮಲಗಿಸಿ ಚಿಕಿತ್ಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಬಾಲಕನಿಗೆ ಬೆಂಚ್ ಮೇಲೆ ಮಲಗಿಸಿ ಚಿಕಿತ್ಸೆ ನೀಡಿದ್ದು, ಇದು ನಮ್ಮ ಗಮನಕ್ಕೆ ಬಂದಿದೆ. ವಿಚಾರ ತಿಳಿದ ತಕ್ಷಣ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ನಿರ್ಲಕ್ಷ್ಯ ತೋರಿದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.