ಬೆಳ್ತಂಗಡಿ: ವಿದ್ಯುತ್ ಆಘಾತದಿಂದ ಯುವತಿ ಮೃತ್ಯು - ಒಂದೇ ದಿನದಲ್ಲಿ ಮೂವರ ಬಲಿ ಪಡೆದ ಮೆಸ್ಕಾಂ ನಿರ್ಲಕ್ಷ್ಯ
Friday, June 28, 2024
ಬೆಳ್ತಂಗಡಿ: ವಿದ್ಯುತ್ ಆಘಾತದಿಂದ ಮಂಗಳೂರಿನಲ್ಲಿ ಇಬ್ಬರು ರಿಕ್ಷಾ ಚಾಲಕರು ಸಾವನ್ನಪ್ಪಿದ ಬೆನ್ನಲ್ಲೇ ಬೆಳ್ತಂಗಡಿಯಲ್ಲಿ ಯುವತಿಯೊಬ್ಬಳು ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ನಡೆದಿದೆ. ಈ ಮೂಲಕ ದ.ಕ.ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಮೂವರು ಮೆಸ್ಕಾಂ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ.
ಬೆಳ್ತಂಗಡಿಯ ಶಿಬಾಜೆ ಗ್ರಾಮದ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ (20) ಮೃತಪಟ್ಟ ಯುವತಿ.
ಪಾರ್ಸೆಲ್ ಬಂದಿದೆ ಎಂದು ಮನೆಯಿಂದ ರಸ್ತೆಗೆ ಬಂದ ಪ್ರತೀಕ್ಷಾ ಶೆಟ್ಟಿಗೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಏಕಾಏಕಿ ಶಾಕ್ ಗೊಳಗಾಗಿದ್ದಾಳೆ. ವಿದ್ಯುತ್ ಕಂಬಕ್ಕೆ ಕೊಡುವ ಸ್ಟೇವೈಯರ್ ಮೂಲಕ ವಿದ್ಯುತ್ ನೀರಿಗೆ ಪ್ರವಾಹಿಸಿ ಆಕೆ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಆಕೆಯ ರಕ್ಷಣೆಗೆ ತಂದೆ ಗಣೇಶ್ ಶೆಟ್ಟಿ ಧಾವಿಸಿದ್ದು, ಅವರಿಗೂ ಶಾಕ್ ಹೊಡೆದಿದೆ. ತಕ್ಷಣ ಪ್ರತೀಕ್ಷಾ ಶೆಟ್ಟಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು. ಮೃತಪಟ್ಟ ಯುವತಿ ಕೊಕ್ಕಡ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಳು.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಸ್ಕಾಂ ತಕ್ಷಣ ಯುವತಿಯ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಕೊಡಬೇಕೆಂದು ಸ್ಪೀಕರ್ ಯು.ಟಿ.ಖಾದರ್ ಆಗ್ರಹಿಸಿದ್ದಾರೆ. ಬೆಳ್ತಂಗಡಿ ಶಾಸಕ ಸ್ಥಳಕ್ಕೆ ಭೇಟಿ ನೀಡಿ ಗರಿಷ್ಠ ಮೊತ್ತ 25 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.