ಹೆತ್ತವರ ಜಗಳ ಬಿಡಿಸಲು ಹೋಗಿ ತಂದೆಯಿಂದಲೇ ಕೊಲೆಯಾದ ಪುತ್ರ
Thursday, June 6, 2024
ಬೆಂಗಳೂರು: ತಂದೆ - ತಾಯಿಯ ಜಗಳ ಬಿಡಿಸಲು ಹೋದ ಪುತ್ರ ತಂದೆಯಿಂದಲೇ ಕೊಲೆಯಾದ ದಾರುಣ ಘಟನೆಯೊಂದು ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ನಡೆದಿದೆ.
ಇನ್‌ಫೋಸಿಸ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಯಶವಂತ್ (23) ತಂದೆಯಿಂದಲೇ ಕೊಲೆಯಾದ ಪುತ್ರ.
ಯಶವಂತ್ ಅಜ್ಜಿ ಕಾಯಿಲೆ ಬಿದ್ದು ಹಾಸಿಗೆ ಹಿಡಿದಿದ್ದರು. ಆಕೆಯನ್ನು ನೋಡಿಕೊಳ್ಳುವ ವಿಚಾರಕ್ಕೆ ಆಗಾಗ ಯಶವಂತ್ ತಂದೆ - ತಾಯಿ ನಡುವೆ ಜಗಳವಾಗುತ್ತಿತ್ತು. ಬೆಳಗ್ಗೆಯೂ ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಜಗಳ ಬಿಡಿಸಲು ಹೋದ ಪುತ್ರನನ್ನು ಹೆದರಿಸಲು ತಂದೆ ಅಡುಗೆ ಮನೆಯಿಂದ ಚಾಕು ತಂದು ಇರಿಯಲು ಹೋಗಿದ್ದಾನೆ. ಚಾಕು ಯುವಕನ ಎದೆಗೆ ಆಳವಾಗಿ ನಾಟಿ ಆತನ ಪ್ರಾಣಪಕ್ಷಿಯೇ ಹಾರಿ ಹೋಗಿದೆ.
ಸದ್ಯ ಆರೋಪಿ ತಂದೆ ಬಸವರಾಜುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.