ಒಂದು ರನ್ನಿನಿಂದ ಸೋತ ನೇಪಾಲ - NEPALA
ಕಿಂಗ್ಸ್‌ಟೌನ್ (ಸೇಂಟ್ ವಿನ್ಸೆಂಟ್),: ಲೋ ಸ್ಕೋರ್ ಪಂದ್ಯವೊಂದರಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಪರದಾಡುವಂತೆ ಮಾಡಿದ ಕ್ರಿಕೆಟ್ ಶಿಶು ನೇಪಾಲ, ಐತಿಹಾಸಿಕ ಜಯವೊಂದನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದೆ. ಇಲ್ಲಿ ನಡೆದ 'ಡಿ' ವಿಭಾಗದ ಟಿ20 ವಿಶ್ವಕಪ್ ಮುಖಾಮುಖಿಯಲ್ಲಿ ನೇಪಾಲ ಕೇವಲ ಒಂದು ರನ್ ಅಂತರದ ಸೋಲನುಭವಿಸಿ ನಿರಾಸೆ ಅನುಭವಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾಕ್ಕೆ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 115 ರನ್ ಮಾತ್ರ. ಜವಾಬಿತ್ತ ನೇಪಾಲ 7 ವಿಕೆಟಿಗೆ 114 ರನ್ ಮಾಡಿ ಶರಣಾಯಿತು. ಇದು ಐಸಿಸಿ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ರಾಷ್ಟ್ರದ ವಿರುದ್ಧ ನೇಪಾಲ ಆಡಿದ 12ನೇ ಪಂದ್ಯವಾಗಿದ್ದು, ಮೊದಲ ಜಯದ ಸಂಭ್ರಮವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತು.
ಇದರೊಂದಿಗೆ ದಕ್ಷಿಣ ಆಫ್ರಿಕಾ ಅಜೇಯವಾಗಿ ತನ್ನ ಲೀಗ್ ಸ್ಪರ್ಧೆಗಳನ್ನು ಮುಗಿಸಿತು. ಅದು ಎಲ್ಲ 4 ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿದೆ.
ಅಂತಿಮ 4 ಓವರ್‌ಗಳಲ್ಲಿ 7 ವಿಕೆಟ್ ಗಳಿಂದ 18 ರನ್ ಗಳಿಸಬೇಕಾದ ಸುಲಭದ ಸವಾಲು ನೇಪಾಲದ ಮುಂದಿತ್ತು. ಆದರೆ 17ನೇ ಓವರ್‌ನಲ್ಲಿ ಮಾರ್ಕೊ ಜಾನ್ಸೆನ್ ಕೇವಲ 3 ರನ್ ನೀಡಿದರು. 18ನೇ ಓವರ್‌ನಲ್ಲಿ ತಬ್ರೇಜ್ ಶಮ್ಪಿ ಅವಳಿ ಆಘಾತವಿಕ್ಕಿದರು. ನೀಡಿದ್ದು ಎರಡೇ ರನ್. ನೋರ್ಜೆ ಪಾಲಾದ 19ನೇ ಓವರ್‌ನಲ್ಲಿ 8 ರನ್ ಬಂತು, ಜತೆಗೆ ಒಂದು ವಿಕೆಟ್ ಬಿತ್ತು. ಬಾರ್ಟ್ ಮನ್ ಎಸೆದ ಅಂತಿಮ ಓವರ್‌ನ ಮೊದಲೆರಡು ಎಸೆತಗಳಲ್ಲಿ ಗುಲ್ಕನ್ ಜಾ ಅವರಿಗೆ ರನ್ ಮಾಡಲಾಗಲಿಲ್ಲ. ಅಂತಿಮ ಎಸೆತದಲ್ಲಿ ಮೊದಲ ರನ್ ಗಳಿಸುವ ವೇಳೆ ಜಾ ರನೌಟಾದರು.
6ನೇ ನಿದರ್ಶನ
ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ದಾಖಲಾದ ಒಂದು ರನ್ ಅಂತರದ 6ನೇ ಗೆಲುವು. ದಕ್ಷಿಣ ಆಫ್ರಿಕಾ ಮತ್ತು ಭಾರತ ಈ ಯಾದಿಯಲ್ಲಿ 2 ಸಲ ಕಾಣಿಸಿಕೊಂಡಿವೆ. ನ್ಯೂಜಿಲ್ಯಾಂಡ್ ಎದುರಿನ 2009ರ ಲಾರ್ಡ್ಸ್ ಪಂದ್ಯವನ್ನೂ ದಕ್ಷಿಣ ಆಫ್ರಿಕಾ ಒಂದು ರನ್ನಿನಿಂದ ಜಯಿಸಿತ್ತು.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಅತ್ಯಧಿಕ 5 ಸಲ ಒಂದು ರನ್ ಅಂತರದ ಗೆಲುವು ಸಾಧಿಸಿತು. ಉಳಿದವರ್ಯಾರೂ ಎರಡಕ್ಕಿಂತ ಹೆಚ್ಚು ಸಲ ಈ ಯಾದಿಯಲ್ಲಿ ಕಾಣಿಸಿಕೊಂಡಿಲ್ಲ
ಇದರೊಂದಿಗೆ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ನಲ್ಲಿ ಕನಿಷ್ಠ ರನ್ ಉಳಿಸಿಕೊಂಡ ಯಾದಿಯ ಮೊದಲೆರಡು ಸ್ಥಾನವನ್ನು ತನ್ನದಾಗಿಸಿಕೊಂಡಿತು. , ಇದೇ ಕೂಟದ ಬಾಂಗ್ಲಾದೇಶ ವಿರುದ್ಧ 114 ರನ್ ಗಳಿಸಿಯೂ ಗೆದ್ದು ಬಂದಿತ್ತು.