ಮಳೆಗಾಲದ ಅತಿಥಿ ಜಿಗಣೆ ಬಗ್ಗೆ ನಿಮಗೆಷ್ಟು ಗೊತ್ತು
ಮಳೆ ಆರಂಭ ಆಯ್ತು ಅಂದರೆ ಮಲೆನಾಡಿನ ಎಲ್ಲಡೆ ಜಿಗಣೆಯ ಕಾಟ ಶುರು ಇಲ್ಲಿನ ಜನ ಜಿಗಣೆಯಿಂದ ಕಚ್ಚಿಸಿಕೊಂಡೆ ಮಳೆಗಾಲವನ್ನು ನಡೆಸುತ್ತಾರೆ. ಆಯುರ್ವೇದ ಪ್ರಕಾರ ಜಿಗಣೆಗಳು ಕಚ್ಚುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.
ಕಜ್ಜಿ, ವೃಣಗಳ ಜಾಗಕ್ಕೆ ಜಿಗಣೆಗಳು ಕಚ್ಚಿ ರಕ್ತ ಹೀರುವುದರಿಂದ ಬ್ಯಾಕ್ಟಿರಿಯಾ ಜಿಗಣೆಯನ್ನು ಸೇರಿ ಗಾಯಗಳು ವಾಸಿಯಾದ ನಿದರ್ಶನಗಳು ಬೇಕಾದಷ್ಟಿವೆ.
ವೈದ್ಯರು ಜಿಗಣೆ ಚಿಕಿತ್ಸೆ ನೀಡಿ ಚರ್ಮರೋಗಗಳನ್ನು ವಾಸಿ ಮಾಡಿ ಯಶಸ್ಸು ಸಾಧಿಸಿದ್ದಾರೆ. ಮನುಷ್ಯನ ದೇಹದ ಮೇಲೆ ಕಾಣಬರುವ ಸುಮಾರು ಹದಿನೆಂಟು ಚರ್ಮರೋಗಗಳಲ್ಲಿ ಯಕ್ಷಿಮಾ, ಕುರು, ದುಷ್ಟವೃಣ, ಗ್ರಂಥಿಗೆಡ್ಡೆ ಮುಂತಾದ ಎಲ್ಲ ರೀತಿಯ ಚರ್ಮ ವ್ಯಾಧಿಗಳಿಗೂ ಜಿಗಣೆಯ ಮೂಲಕ ಚಿಕಿತ್ಸೆ ನೀಡಿ ಕಾಯಿಲೆ ವಾಸಿ ಮಾಡುವಲ್ಲಿ ಯಶಸ್ವಿಯಾದ ನಿದರ್ಶನಗಳಿವೆ.
ಜಿಗಣೆಯಲ್ಲಿ ಇರುವ ಪ್ರಾಕಾರಗಳು ಯಾವುವೂ
ಜಿಗಣೆಯಲ್ಲಿ ಆಧುನಿಕ ವಿಜ್ಞಾನದ ಪ್ರಕಾರ ಸುಮಾರು 650ವಿಧಗಳಿದ್ದು ಆಯುರ್ವೇದದ ಪ್ರಕಾರ 12ವಿಧ ಮಾತ್ರ ಲಭ್ಯ ಇವೆ ಎನ್ನಲಾಗಿದೆ. ಅವುಗಳಲ್ಲಿ ಆರು ವಿಧದವುಗಳು ವಿಷರಹಿತವಾಗಿದ್ದು, ಇವುಗಳನ್ನು ಮಾತ್ರ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಜಿಗಣೆಗಳು ಕೆರೆ, ಕೊಳ ಮುಂತಾದ ಸಿಹಿ ನೀರಿನ ಪ್ರದೇಶಗಳಲ್ಲಿ ವಾಸಿಸುತ್ತಿರುತ್ತವೆ. ದನ ಜಿಗಣೆ(ಹಿರುಡಿನಿಯ ಗ್ಯಾನ್ಯು ಲೋಸೆ) ಪ್ರಭೇದದ ಜಿಗಣೆಯು ಸಾಮಾನ್ಯವಾಗಿ ಎಲ್ಲೆಡೆಯೂ ಕಂಡು ಬರುತ್ತದೆ.
ಇವುಗಳ ಜೀರ್ಣಾಂಗಗಳಲ್ಲಿ ರಕ್ತವನ್ನು ತುಂಬಿಕೊಳ್ಳಲು ವಿಶೇಷವಾದ ಚೀಲವಿದ್ದು, ಒಮ್ಮೆ ಹೊಟ್ಟೆ ತುಂಬಾ ರಕ್ತ ಹೀರಿದ ಜಿಗಣೆ ಒಂದು ವರ್ಷ ಕಾಲ ಉಪವಾಸವಾಗಿರಬಲ್ಲದು ಎಂದು ಹೇಳಲಾಗಿದೆ. సిపి ನೀರಿನಲ್ಲಿರುವ ಅಂದರೆ ಕೊಳಗಳಲ್ಲಿರುವ ಜಿಗಣೆಗಳನ್ನು ಕಾಲಿಗೆ ತುಪ್ಪ ಹಚ್ಚಿ ಕೊಳಕ್ಕೆ ಇಳಿದು ಜಿಗಣೆಗಳು ಕಾಲಿಗೆ ಅಂಟಿಕೊಂಡಾಗ ಅದನ್ನು ಹಿಡಿದು ಮಣ್ಣಿನ ಮಡಕೆಯಲ್ಲಿ ಹುಲ್ಲು ಹಾಕಿ ಬಟ್ಟೆಕಟ್ಟಿ ಸಂಗ್ರಹಿಸಿಟ್ಟುಕೊಂಡು ಬಳಿಕ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ.
ಕೊಡಗಿನಲ್ಲಿ ಹಿಂದೆ ಏಲಕ್ಕಿ ತೋಟಗಳು ಹೆಚ್ಚಾಗಿದ್ದ ಕಾಲದಲ್ಲಿ ನೆರಳು ಮತ್ತು ನೀರಿನ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಿಗಣೆಗಳಿರುತ್ತಿದ್ದವು. ಅವುಗಳ ನಡುವೆಯೇ ಮಳೆಗಾಲದಲ್ಲಿ ಏಲಕ್ಕಿ ತೋಟದಲ್ಲಿ ಕೆಲಸ ಮಾಡಬೇಕಾಗಿತ್ತು. ಈ ಸಂದರ್ಭ ಜಿಗಣೆಗಳು ಕಾಲಿಗೆ ಹತ್ತದಂತೆ ನಿಯಂತ್ರಣ ಮಾಡಲು ತಂಬಾಕು ನೀರು, ಅಥವಾ ನಿಂಬೆಹಣ್ಣಿನ ರಸವನ್ನು ಕಾಲಿಗೆ ಸವರಿಕೊಳ್ಳುತ್ತಿದ್ದರು. ಇವತ್ತಿಗೂ ಜಿಗಣೆಯಿಂದ ತಪ್ಪಿಸಿಕೊಳ್ಳಲು ಜನ ಇದನ್ನೇ ಮಾಡುತ್ತಾರೆ.