ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಸೋಲಿಗೆ ಕಾರಣವೇನು?
Tuesday, June 4, 2024
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಮತಬೇಟೆಯಾಡಿದೆ. ಕಳೆದ 33 ವರ್ಷಗಳಿಂದಲೂ ಬಿಜೆಪಿ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದು, ಕಾಂಗ್ರೆಸ್ ಜಿಲ್ಲೆಯನ್ನು ತನ್ನ ತೆಕ್ಕೆಗೆ ತರಲು ಹೆಣಗಾಡುತ್ತಿದೆ. ಆದರೆ ಈ ಬಾರಿಯೂ ದ.ಕ.ಜಿಲ್ಲೆಯಲ್ಲಿ ಖಾತೆ ತೆರೆಯಲು ಕಾಂಗ್ರೆಸ್ ವಿಫಲ ಯತ್ನ ಮಾಡಿದೆ.
ಹೌದು.. ಈ ಬಾರಿ ಶತಾಯಗತಾಯ ದ.ಕ.ಜಿಲ್ಲೆಯನ್ನು ಕೈವಶ ಮಾಡಿಕೊಳ್ಳಲು ಕೈಪಕ್ಷ ಹೊಸಮುಖ, ಸುಶಿಕ್ಷಿತ, ನ್ಯಾಯವಾದಿ, ಕರಾವಳಿಯಲ್ಲಿ ಒಂದಷ್ಟು ಹೆಸರು ಮಾಡಿರುವ ಪದ್ಮರಾಜ್ ಆರ್. ಪೂಜಾರಿಯವರನ್ನು ಕಣಕ್ಕಿಳಿಸಿತ್ತು. ಈ ಬಾರಿ ಪದ್ಮರಾಜ್ ಅವರು ಗೆದ್ದೇ ಗೆಲ್ಲುವರೆಂಬ ನಿರೀಕ್ಷೆ ಕೈ ಪಾಳಯದಲ್ಲಿತ್ತು. ಯಾಕೆಂದರೆ ಗ್ಯಾರಂಟಿ, ಬಿಲ್ಲವ ಮತ, ಎಸ್ ಡಿಪಿಐ ಸ್ಪರ್ಧೆ ಮಾಡದ್ದು ತಮಗೆ ಲಾಭ ಆಗಬಹುದು ಎಂಬ ನಿರೀಕ್ಷೆ ದೊಡ್ಡದಾಗಿಯೇ ಇತ್ತು. ಆದರೆ ಕಾಂಗ್ರೆಸ್ ಪಕ್ಷದ ಯಾವ ನಿರೀಕ್ಷೆಯೂ ನಿಜವಾಗದೆ ಹುಸಿಯಾಗಿದೆ.
ಯಾಕೆಂದರೆ ಬಿಲ್ಲವ ಮತದಾರರು ತಮ್ಮದೇ ಸಮುದಾಯದ ಪದ್ಮರಾಜ್ ಅವರ ಕೈಹಿಡಿಯದೆ ಹಿಂದುತ್ವವನ್ನು ಅಪ್ಪಿಕೊಂಡಿದ್ದಾರೆ. ಈ ಮೂಲಕ ದ.ಕ.ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಜಾತಿ ಕೆಲಸಮಾಡಲ್ಲ ಎಂಬ ಸತ್ಯ ಮತ್ತೊಮ್ಮೆ ದೃಢವಾಯಿತು. ಅದೇ ರೀತಿ ಕಾಂಗ್ರೆಸ್ ಗ್ಯಾರಂಟಿಯೂ ಯಾವುದೇ ರೀತಿಯಲ್ಲಿ ವರ್ಕೌಟ್ ಆಗಿಲ್ಲ. ಜೊತೆಗೆ ಎಸ್ ಡಿಪಿಐ ಮತ ಕಾಂಗ್ರೆಸ್ ಪಾಲಾದರೂ ಅದು ಯಾವುದೇ ರೀತಿಯಲ್ಲಿ ಕೈಪಕ್ಷಕ್ಕೆ ಗೆಲ್ಲುವ ಊರುಗೋಲಾಗಿಲ್ಲ. ಆದ್ದರಿಂದ ಮತ್ತೆ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸುವಂತಾಯ್ತು.