ಯಡಿಯೂರಪ್ಪರ ಬಂಧಿಸುವ ಅಗತ್ಯವಿಲ್ಲ, ವಿಚಾರಣೆಗೆ ಹಾಜರಾಗಲು ಆದೇಶ: ಹೈಕೋರ್ಟ್‌ನಿಂದ ಬಿಗ್ ರಿಲೀಫ್
Friday, June 14, 2024
ಬೆಂಗಳೂರು: ಪೊಕ್ಸೊ ಕೇಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸುವ ಅಗತ್ಯವಿಲ್ಲ. ವಿಚಾರಣೆಗೆ ಹಾಜರಾಗಲು ಅವಕಾಶ ಕೊಡಿ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಮೂಲಕ ಬಂಧನ ಭೀತಿಯಲ್ಲಿದ್ದ ಯಡಿಯೂರಪ್ಪರಿಗೆ ರಿಲೀಫ್ ಸಿಕ್ಕಿದೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯಡಿಯೂರಪ್ಪರ ವಿರುದ್ಧ ಬೆಂಗಳೂರಿನ ಸ್ಥಳೀಯ ಕೋರ್ಟ್ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ವಿಚಾರಣೆಗೆ ಬರಲು ಹಲವು ನೋಟಿಸ್ ನೀಡಿದರೂ ಆರೋಪಿ ಹಾಜರಾಗುತ್ತಿಲ್ಲವೆಂದು ಸಿಐಡಿ ಕೋರ್ಟ್ ಮೊರೆ ಹೋಗಲಾಗಿತ್ತು. ಇದೇ ವೇಳೆ ಹೈಕೋರ್ಟಿನಲ್ಲಿ ಬಂಧನ ಮಾಡದಂತೆ ಬಿ.ಎಸ್.ಯಡಿಯೂರಪ್ಪ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ತುರ್ತಾಗಿ ಬಂಧಿಸುವ ಅಗತ್ಯವಿಲ್ಲ. ವಯಸ್ಸಿನ ಕಾರಣದಿಂದ ಅವರನ್ನು ವಿಚಾರಣೆಗೆ ಬರಲು ಅವಕಾಶ ಕೊಡಿ ಎಂದು ಹೇಳಿದ್ದಲ್ಲದೆ, ಜೂನ್ 17ಕ್ಕೆ ತಪ್ಪದೆ ತನಿಖೆಗೆ ಹಾಜರು ಪಡಿಸುವಂತೆ ವಕೀಲರಿಗೆ ಸೂಚನೆ ನೀಡಿದೆ.
ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು ಆರೋಗ್ಯ ಸಮಸ್ಯೆಗಳಿರುತ್ತವೆ. ಹೀಗಾಗಿ ಸದ್ಯಕ್ಕೆ బంధిసి ತನಿಖೆಗೊಳಪಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಮಹಿಳೆ ನೀಡಿರುವ ದೂರಿನ ಬಗ್ಗೆ ಆಕ್ಷೇಪ ಎತ್ತಿದ ವಕೀಲರು, ಆಕೆಯ ದೂರನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಗೃಹ ಸಚಿವರೇ ಹೇಳಿದ್ದರು. 50ಕ್ಕೂ ಅಧಿಕ ಮಂದಿ ವಿರುದ್ಧ ಆಕೆ ದೂರು ನೀಡಿದ್ದರು. ಮಾಜಿ ಮುಖ್ಯಮಂತ್ರಿ ಮೇಲೆ ಅಂಥದ್ದೇ ಆರೋಪ ಮಾಡಿದ್ದಾರೆ. ಪುರಾವೆ ಇಲ್ಲದೆ ದೂರು ಕೊಟ್ಟ ಮಾತ್ರಕ್ಕೆ ಬಂಧಿಸುವ ಅಗತ್ಯವಿಲ್ಲ ಎಂದು ವಾದ ಮಂಡಿಸಿದ್ದರು.