ಮಂಗಳೂರು: ಪಿಡಬ್ಲ್ಯುಡಿ ಗುತ್ತಿಗೆದಾರರ ಮನೆಗೆ ನುಗ್ಗಿದ ಡಕಾಯಿತಿ ಗ್ಯಾಂಗ್ - ಮನೆಯವರನ್ನು ಕಟ್ಟಿಹಾಕಿ ಬೆದರಿಸಿ ದರೋಡೆ
Saturday, June 22, 2024
ಮಂಗಳೂರು: ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಮನೆಗೆ ನುಗ್ಗಿದ ಡಕಾಯಿತಿ ತಂಡವೊಂದು ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ಹಣ ಒಡವೆಗಳನ್ನು ದರೋಡೆ ನಡೆಸಿರುವ ಘಟನೆ ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪಿಡಬ್ಲ್ಯುಡಿ ಗುತ್ತಿಗೆದಾರ ಉಳಾಯಿಬೆಟ್ಟುವಿನ ಪದ್ಮನಾಭ ಕೋಟ್ಯಾನ್‌ರವರ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿದೆ. ಮುಖ ಮುಚ್ಚಿಕೊಂಡು ಬಂದ 8-9 ಮಂದಿಯಿದ್ದ ತಂಡವೊಂದು ಶುಕ್ರವಾರ ರಾತ್ರಿ 8ಗಂಟೆ ಸುಮಾರಿಗೆ ಮನೆಗೆ ನುಗ್ಗಿದೆ. ಬಳಿಕ ಬಳಿಕ ಮನೆಯವರನ್ನೆಲ್ಲಾ ಬೆಡ್‌ಶೀಟ್ ನಲ್ಲಿ ಕಟ್ಟಿಹಾಕಿ, ಚೂರಿ ತೋರಿಸಿ ಬೆದರಿಸಿದೆ. ಈ ವೇಳೆ ಪದ್ಮನಾಭ ಕೋಟ್ಯಾನ್ ಅವರ ಬಲಗೈಗೆ ಚೂರಿಯಿಂದ ಇರಿಯಲಾಗಿದೆ.
"ನಮ್ಮೊಂದಿಗೆ ಎಲ್ಲರೂ ಸಹರಿಸಬೇಕು. ಮನೆಯಲ್ಲಿ ಹಣವಿದೆಯೇ ಎಂದು ನೋಡುತ್ತೇವೆ" ಎಂದು ದರೋಡೆಕೋರ ತಂಡ ಮನೆಯೆಲ್ಲಾ ಜಾಲಾಡಿದೆ. ಈ ವೇಳೆ ಕೈಗೆ ಸಿಕ್ಕಿದ ಹಣ , ಒಡವೆಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದೆ. ಹೋಗುವಾಗ ಮನೆಯ ಮಾಲಕ ಪದ್ಮನಾಭ ಕೋಟ್ಯಾನ್ ಅವರ ವಾಹನವನ್ನು ತೆಗೆದುಕೊಂಡು ಹೋಗಿದೆ. ಆದರೆ ಮನೆಯಿಂದ ಸ್ವಲ್ಪ ದೂರದಲ್ಲಿ ವಾಹನವನ್ನು ಇಟ್ಟು ತಂಡ ಪರಾರಿಯಾಗಿದೆ. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.