"ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ" -ಗಣೇಶ್ ರಾವ್
Friday, June 14, 2024
ಬಹುನಿರೀಕ್ಷಿತ "ತುಡರ್" ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ
ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ "ತುಡರ್" ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಯಿತು. ನಗರದ ಭಾರತ್ ಸಿನೆಮಾಸ್ ನಲ್ಲಿ ಜರುಗಿದ ಸಮಾರಂಭದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
ಬಳಿಕ ಮಾತಾಡಿದ ಕರಾವಳಿ ಗ್ರೂಪ್ ಆಫ್ ಎಜುಕೇಷನ್ ಸಂಸ್ಥೆಯ ಚೇರ್ ಮೆನ್ ಗಣೇಶ್ ರಾವ್ ಅವರು, "ತುಡರ್ ಅಂದರೆ ಕನ್ನಡದಲ್ಲಿ ಬೆಳಕು ಅಂತ ಅರ್ಥ. ಒಂದು ಬೆಳಕಿನಿಂದ ಎಷ್ಟೋ ದೀಪಗಳನ್ನು ಬೆಳಗಿಸಬಹುದು. ಅದೇ ರೀತಿ ಬಿಡುಗಡೆಯಾಗಿರುವ ತುಳು ಸಿನಿಮಾ ತುಳು ತುಡರ್ ಚಿತ್ರರಂಗದಲ್ಲಿ ಹೊಸ ಬೆಳಕಾಗಿ ಮೂಡಿಬರಲಿ. ಸಿನಿಮಾ ತಂಡವನ್ನು ನೋಡಿದರೆ ಖಂಡಿತ ಈ ಸಿನಿಮಾ ಗೆಲ್ಲುವ ವಿಶ್ವಾಸವಿದೆ. ಸಮಾಜಕ್ಕೆ ಮನೋರಂಜನೆಯ ಜೊತೆಗೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಲಿ. ಚಿತ್ರತಂಡದಿಂದ ಇನ್ನಷ್ಟು ಸದಭಿರುಚಿಯ ಸಿನಿಮಾಗಳು ಬರಲಿ. ಸಂಸ್ಕೃತಿಗೆ ಪೂರಕವಾದ ಜಾತಿ ಧರ್ಮ ದ್ವೇಷವನ್ನು ಪಸರಿಸದೆ ಜನರನ್ನು ಒಂದುಮಾಡುವ ಸಿನಿಮಾಗಳು ಬರಲಿ" ಎಂದು ಶುಭ ಹಾರೈಸಿದರು.
ಬಳಿಕ ಮಾತಾಡಿದ ಅರವಿಂದ್ ಬೋಳಾರ್, "ತುಳು ಸಿನಿಮಾ ಬಿಡುಗಡೆ ಎಂದರೆ ಭಯವಾಗುತ್ತದೆ. ಯಾಕೆಂದರೆ ಸಿನಿಮಾ ಎಷ್ಟು ದಿನ ನಡೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ತುಡರ್ ಸಿನಿಮಾ ವೀಕ್ಷಿಸಿದವರು ಚಿತ್ರತಂಡವನ್ನು ಮೆಚ್ಚಿ ಬೆನ್ನುತಟ್ಟಿದ್ದಾರೆ. ಹೀಗಾಗಿ ನಮಗೆ ಧೈರ್ಯ ಬಂದಿದೆ. ಈ ಸಿನಿಮಾ ಗೆಲ್ಲಲು ತುಳುವರು ಥಿಯೇಟರ್ ಗೆ ಬಂದು ಸಿನಿಮಾ ನೋಡಬೇಕು" ಎಂದರು.
ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, "ಸಿನಿಮಾ ಕುರಿತು ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ಗೆಲ್ಲಲು ತುಳುವರ ಆಶೀರ್ವಾದ ಅಗತ್ಯ" ಎಂದರು.
ವಾಲ್ಟರ್ ನಂದಳಿಕೆ ಮಾತಾಡಿ, "ಸಿನಿಮಾ ನೋಡಿದವರು ಬಹಳ ಸಮಯದ ಬಳಿಕ ಒಳ್ಳೆಯ ಸಿನಿಮಾ ನೋಡಿದ್ದಾಗಿ ಹೇಳುತ್ತಿದ್ದಾರೆ. ಸಿನಿಮಾ ಖಂಡಿತ ಗೆಲ್ಲಲಿದೆ" ಎಂದರು.
ವೇದಿಕೆಯಲ್ಲಿ ಭಾರತ್ ಸಿನೆಮಾಸ್ ನ ಬಾಲಕೃಷ್ಣ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಮನೋಹರ್ ಶೆಟ್ಟಿ, ಉದಯ ಪೂಜಾರಿ ಬಲ್ಲಾಳ್ ಬಾಗ್, ಉಮೇಶ್ ರೈ ಪದವು ಮೇಗಿನಮನೆ, ಸ್ವರಾಜ್ ಶೆಟ್ಟಿ, ನಟ ಸಿದ್ದಾರ್ಥ್ ಶೆಟ್ಟಿ, ನಟಿ ದೀಕ್ಷಾ ಭಿಸೆ, ರೂಪ ವರ್ಕಾಡಿ, ನಿರ್ದೇಶಕ ತೇಜೇಶ್ ಪೂಜಾರಿ, ಪ್ರಕಾಶ್ ಮಹಾದೇವನ್, ವಿಲ್ಸನ್ ರೆಬೆಲ್ಲೋ, ವಿದ್ಯಾ, ಸಂಪತ್, ಹರೀಶ್ ಶೆಟ್ಟಿ, ವಿಕಾಸ್ ಪುತ್ರನ್, ಮೋಹನ್ ರಾಜ್, ಪ್ರೇಮ್ ಶೆಟ್ಟಿ ಸುರತ್ಕಲ್, ಹಂಚಿಕೆದಾರ ಸಚಿನ್ ಎಸ್. ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು. ಚಿರಾಗ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.
ತುಡರ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು.
ಈಗಾಗಲೇ ತುಡರ್ ಸಿನಿಮಾ ವಿದೇಶ ಸಹಿತ ಮಂಗಳೂರು, ಉಡುಪಿ, ಪುತ್ತೂರು, ಸುರತ್ಕಲ್, ಪಡುಬಿದ್ರೆಯಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಪ್ರೇಕ್ಷಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಉತ್ತಮ ಚಿತ್ರಕತೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ. ನಾಯಕ ನಟ ಸಿದ್ದಾಥ್೯ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.