ಮಂಗಳೂರು: ವೃದ್ಧದಂಪತಿಯ ಹಲ್ಲೆಗೈದು ದರೋಡೆ - ಘಟನೆ ನಡೆದು 5 ಗಂಟೆಯೊಳಗೆ ಚಡ್ಡಿಗ್ಯಾಂಗ್‌ನ ನಾಲ್ವರು ಅಂದರ್
Tuesday, July 9, 2024
ಮಂಗಳೂರು: ನಗರದ ಕೋಟೆಕಣಿಯ ಮನೆಯೊಂದಕ್ಕೆ ಕಿಟಕಿ ಸರಳು ಕತ್ತರಿಸಿ ನುಗ್ಗಿ ವೃದ್ಧದಂಪತಿಯನ್ನು ಬೆದರಿಸಿ ಲಕ್ಷಾಂತರ ಮೌಲ್ಯದ ಕಾರು, ಚಿನ್ನಾಭರಣ ದರೋಡೆಗೈದು ಪರಾರಿಯಾಗಿದ್ದ ಚಡ್ಡಿಗ್ಯಾಂಗ್ ಅನ್ನು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿ ಕಂಬಿ ಹಿಂದೆ ಕಳುಹಿಸಿದೆ.
ಮಧ್ಯಪ್ರದೇಶ ರಾಜ್ಯ ಮೂಲದ ರಾಜು ಸಿಂಗ್ವಾನಿಯ(24), ಮಯೂರ್(30), ಬಾಲಿ(22), ವಿಕ್ಕಿ(21) ಬಂಧಿತ ಚಡ್ಡಿಗ್ಯಾಂಗ್ ದರೋಡೆಕೋರರು.
ಜುಲೈ 9ರ ನಸುಕಿನ ಜಾವ 4ಗಂಟೆ ಸುಮಾರಿಗೆ ಬರ್ಮುಡಾ ಚಡ್ಡಿ, ಬನಿಯನ್ ಧರಿಸಿರುವ ನಾಲ್ವರ ತಂಡ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎಂಬವರ ಮನೆ ಕಿಟಕಿಯ ಗ್ರಿಲ್ ಕತ್ತರಿಸಿ ಒಳನುಗ್ಗಿದೆ. ತಂಡ ವಿಕ್ಟರ್‌ವರಿಗೆ ರಾಡಿನಿಂದ ಹಲ್ಲೆಗೈದು ಅವರ ಪತ್ನಿಗೂ ಹಲ್ಲೆಗೈದು ಬೊಬ್ಬೆ ಹಾಕದಂತೆ, ಯಾರಿಗೂ ಫೋನ್ ಮಾಡದಂತೆ ಬೆದರಿಸಿದೆ. ಬಳಿಕ ಕಪಾಟಿನಲ್ಲಿದ್ದ 12 ಲಕ್ಷ ಮೌಲ್ಯದ ಚಿನ್ನ, ವಜ್ರದಾಭರಣ, ಮೊಬೈಲ್ ಮತ್ತು 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, 3ಸಾವಿರ ನಗದು ಸುಲಿಗೆ ಮಾಡಿದೆ. ಅಲ್ಲದೆ ಸದ್ರಿ ಮನೆಯ ಹೊರಗೆ ಪಾರ್ಕ್ ಮಾಡಿದ್ದ ಕಾರಿನ ಸಮೇತ ಪರಾರಿಯಾಗಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರ ಆರೋಪಿಗಳ ಬೆನ್ನುಬಿದ್ದಿದ್ದಾರೆ. ಆರೋಪಿಗಳು ಕದ್ದೊಯ್ದ ಕಾರು ಮುಲ್ಕಿ ಬಳಿ ಪತ್ತೆಯಾಗಿದೆ. ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಗಳು ಅಲ್ಲಿಂದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಮಂಗಳೂರಿಗೆ ಪ್ರಯಾಣಿಸಿದ್ದು ತಿಳಿದುಬಂದಿದೆ. ತಕ್ಷಣ ಕೆಎಸ್ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಶಂಕಿತ ಆರೋಪಿಗಳು ಬೆಂಗಳೂರು ಕಡೆ ಪ್ರಯಾಣಿಸಿದ ಮಾಹಿತಿ ಲಭ್ಯವಾಗಿದೆ. ಅದರಂತೆ ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿ ಸಕಲೇಶಪುರದಲ್ಲಿ ಬಸ್ಸು ತಡೆದು ಪ್ರಯಾಣಿಸುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ದರೋಡೆಗೈದ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ನಡೆಸಲಾಗಿ ಅವರುಗಳು ಕೃತ್ಯವೆಸಗಿದ ಬಗ್ಗೆ ಒಪ್ಪಿದ್ದು, ಅವರ ವಶದಲ್ಲಿದ್ದ ಮಂಗಳೂರು ನಗರದಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಗಳು ಹಾಗೂ ಹಣವನ್ನು ಅಮಾನತ್ತು ಪಡಿಸಿ ಉರ್ವಾ ಪೊಲೀಸ್ ಅಧಿಕಾರಿಗಳಿಗೆ ವಶಕ್ಕೆ ನೀಡಿರುತ್ತಾರೆ. ಈ ಮೂಲಕ ಪೊಲೀಸರು ಘಟನೆ ನಡೆದ 5ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.