ಬೆಳ್ತಂಗಡಿ: ಬೊಲೆರೊ ವಾಹನ ಢಿಕ್ಕಿಯಾಗಿ ಬೈಕ್ ಸವಾರೆ ಬಾಲಕಿ ಸಾವು
Saturday, July 27, 2024
ಬೆಳ್ತಂಗಡಿ: ಬೊಲೆರೊ ವಾಹನವೊಂದು ಬೈಕ್‌ಗೆ ಢಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕಿ ಮೃತಪಟ್ಟ ಘಟನೆ ಮುಂಡಾಜೆಯ ಸೀಟು ಬಳಿ ಶನಿವಾರ ಸಂಜೆ ಸಂಭವಿಸಿದೆ.
ಮುಂಡಾಜೆ ಕಲ್ಮಂಜ ನಿವಾಸಿ ಗುರುಪ್ರಸಾದ್ ಗೋಖಲೆಯವರ ಪುತ್ರಿ ಉಜಿರೆ ಎಸ್‌ಡಿಎಂ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಅನರ್ಘ್ಯ (9) ಮೃತಪಟ್ಟ ಬಾಲಕಿ.
ಗುರುಪ್ರಸಾದ್ ಗೋಖಲೆ ಹಾಗೂ ಅವರ ಪುತ್ರಿ ಅನರ್ಘ್ಯ ಉಜಿರೆಯಿಂದ ಮನೆಕಡೆಗೆ ಹೊರಟಿದ್ದರು. ಈ ವೇಳೆ ಹಿಂದಿನಿಂದ ಬಂದ ಬೊಲೆರೊ ವಾಹನ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ.
ಗಾಯಗೊಂಡಿದ್ದ ತಂದೆ-ಪುತ್ರಿಯನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಅನರ್ಘ್ಯ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅಪಘಾತವಾದ ಬಳಿಕ ತಪ್ಪಿಸಿಕೊಂಡಿದ್ದ ಬೊಲೆರೊ ವಾಹನವನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆ ಹಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.