ಬೆಂಗಳೂರು: ವಿವಾಹಿತೆಯೊಂದಿಗಿನ ಅನೈತಿಕ ಸಂಬಂಧಕ್ಕೆ ಅಡ್ಡವಾಯಿತೆಂದು ಮಗುವನ್ನು ಹೊಡೆದು ಕೊಂದ ಪಾಪಿ ಅರೆಸ್ಟ್
Saturday, July 13, 2024
ಬೆಂಗಳೂರು: ವಿವಾಹಿತೆಯೊಂದಿಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಯಿತೆಂದು ದುಷ್ಟನೋರ್ವನು ಆಕೆಯ ಮೂರು ವರ್ಷದ ಮಗುವನ್ನು ಹೊಡೆದು ಕೊಂದು ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದೀಗ ರಾಕ್ಷಸನ ವಿರುದ್ಧ ಪ್ರಿಯತಮೆಯೇ ದೂರು ನೀಡಿದ್ದು, ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂರು ವರ್ಷದ ಅಶ್ವಿನ್ ಕೊಲೆಯಾದ ದುರ್ದೈವಿ ಮಗು. ಈ ಮಗುವಿನ ತಾಯಿ ರಮ್ಯಾ ಎಂಬಾಕೆ ನೀಡಿರುವ ದೂರಿನನ್ವಯ ಆಕೆಯ ಪ್ರಿಯಕರ ಮೈಕೆಲ್ ರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿಯ ವಿರಾಟ್ ನಗರದ ನಿವಾಸಿ ಮೈಕೆಲ್ ರಾಜ್ ಗ್ಯಾರೇಜ್ ಅಂಗಡಿಯನ್ನು ಇಟ್ಟುಕೊಂಡಿದ್ದ. ಈತ ಅವಿವಾಹಿತನಾಗಿದ್ದ. ಅದೇ ಏರಿಯಾ ಸಮೀಪದಲ್ಲಿ ರಮ್ಯಾ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಳು. ಆರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದಳು. ಆದರೆ ಒಂದು ವರ್ಷದ ಹಿಂದೆ ದಂಪತಿ ಮಧ್ಯೆ ವೈಮನಸ್ಸು ಉಂಟಾಗಿ ಪತಿಯಿಂದ ದೂರವಾಗಿದ್ದಳು. ಈ ವೇಳೆ ಆರೋಪಿ ಮೈಕೆಲ್ ರಾಜ್‌ನ ಪರಿಚಯವಾಗಿತ್ತು.
ಪರಿಚಯ ಕ್ರಮೇಣ ಇಬ್ಬರ ಸಂಬಂಧ ಆತ್ಮೀಯತೆಗೆ ತಿರುಗಿತ್ತು. ಸ್ನೇಹವು ಪ್ರೀತಿಗೆ ತಿರುಗಿತ್ತು. ಕಳೆದ ಆರೇಳು ತಿಂಗಳಿಂದ ರಮ್ಯಾಳ ಮನೆಗೆ ಮೈಕಲ್ ಬಂದು ಹೋಗುತ್ತಿದ್ದ. ಕಳೆದ ಜುಲೈ 6ರಂದು ಮನೆಗೆ ಬಂದಾಗ ಅಶ್ವಿನ್‌ನನ್ನು ಕಂಡು ಕೋಪಗೊಂಡಿದ್ದ. ತಮ್ಮಿಬ್ಬರ ಸಂಬಂಧಕ್ಕೆ ಮಗು ಅಡ್ಡಿಯಾಗಲಿದೆ ಎಂದು ಭಾವಿಸಿ ಕೆನ್ನೆಗೆ ಹೊಡೆದು, ನಂತರ ಬಾತ್ ರೂಮಿನ ಗೋಡೆಗೆ ತಲೆಯನ್ನು ಗುದ್ದಿ ಊತ ಬರುವಂತೆ ಮಾಡಿದ್ದ.
ಇದನ್ನು ರಮ್ಯಳಿಗೆ ಹೇಳದೆ ಅಲ್ಲಿಂದ ಕಾಲ್ಕಿತ್ತಿದ್ದ. ಮಗುವಿನ ಮೇಲೆ ಈ ರೀತಿ ಹಲ್ಲೆಯಾಗಿರುವ ವಿಚಾರ ರಮ್ಯಾಗೆ ತಿಳಿದಿರಲಿಲ್ಲ. ಅದೇ ದಿನ ರಾತ್ರಿ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.