ಮಂಗಳೂರು: ಸಾಫ್ಟವೇರ್ ಕಂಪೆನಿಯ ಕ್ಯಾಬ್ ಚಾಲಕರ ನಡುವೆ ಹೊಡೆದಾಟ - ಒಬ್ಬನಿಗೆ ಚೂರಿ ಇರಿತ
Thursday, July 18, 2024
ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯಲ್ಲಿನ ದಿಯಾ ಸಿಸ್ಟಮ್ ಎಂಬ ಸಾಫ್ಟ್‌ವೇರ್ ಕಂಪೆನಿಯ ಕ್ಯಾಬ್ ಚಾಲಕರ ನಡುವೆ ಬುಧವಾರ ರಾತ್ರಿ ಹೊಡೆದಾಟ ನಡೆದು ಓರ್ವನಿಗೆ ಚೂರಿ ಇರಿತ ನಡೆಸಿರುವ ಘಟನೆ ನಡೆದಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ
ಸಂದೀಪ್ ಚೂರಿ ಇರಿತಕ್ಕೊಳಗಾದ ಕ್ಯಾಬ್ ಚಾಲಕ. ದಿಯಾ ಸಿಸ್ಟಮ್ ಕಂಪೆನಿಯಲ್ಲಿ ಚಾಲಕರಾಗಿದ್ದ ತೇಜಸ್ ಶೆಟ್ಟಿ, ಭವಿತ್ ಶೆಟ್ಟಿ, ಪ್ರೀತಂ ಮತ್ತು ಪುನೀತ್ ದೇವಾಡಿಗ ಸೇರಿ ಹಲ್ಲೆ ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ. ತೇಜಸ್ ಮತ್ತು ಸಂದೀಪ್ ಒಂದೇ ಸಂಸ್ಥೆಯಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇವರೊಳಗೆ ಹಳೆ ದ್ವೇಷವಿತ್ತು.
ಬುಧವಾರ ರಾತ್ರಿ 9.20ರ ಸುಮಾರಿಗೆ ಸಂದೀಪ್ ತಮ್ಮ ಶಿಫ್ಟ್ ಮುಗಿಸಿ ಹೊರ ಬಂದ ವೇಳೆ ಹಳೆ ದ್ವೇಷದಲ್ಲಿ ಇಬ್ಬರ ನಡುವೆ ಮತ್ತೆ ಜಗಳ ನಡೆದಿದೆ. ಈ ವೇಳೆ ತೇಜಸ್ ತನ್ನ ಸಹೋದರ ಹಾಗೂ ಮತ್ತಿಬ್ಬರು ಸ್ನೇಹಿತರೊಂದಿಗೆ ಸೇರಿ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದಾನೆ. ಹರಿತ ಆಯುಧದಿಂದ ಸಂದೀಪ್ ತಲೆಗೆ ಹಲ್ಲೆ ನಡೆಸಲಾಗಿದ್ದು, ತೀವ್ರ ಗಾಯಗೊಂಡಿದ್ದ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.