ಮಳೆ ಇಳಿಕೆ ಬೆನ್ನಲ್ಲೇ ಶಿರಾಡಿ ಘಾಟ್ ಓಪನ್, ಸಂಪಾಜೆಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ
Wednesday, July 24, 2024
ಮಂಗಳೂರು: ಮಳೆ ಕೊಂಚ ಬಿಡುವು ಪಡೆದಿದ್ದರಿಂದ ಎನ್ಎಚ್- 75ರ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಸಕಲೇಶಪುರ ಸಮೀಪದ ದೊಡ್ಡತಪ್ಪಲು ಬಳಿ ಹಾಗೂ ಶಿರಾಡಿ ಘಾಟ್‌ನಲ್ಲಿ ರಸ್ತೆ ಮೇಲೆಯೇ ಮಣ್ಣು ಕುಸಿತಗೊಂಡಿತ್ತು. ಆದ್ದರಿಂದ ಸಕಲೇಶಪುರದಿಂದ ಮಂಗಳೂರು, ಧರ್ಮಸ್ಥಳದ ನಡುವೆ ರಾತ್ರಿ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಆದರೆ ರವಿವಾರ ಸಂಜೆಯಿಂದ ಮಳೆಯಬ್ಬರ ಕಡಿಮೆಯಾಗುತ್ತಿದೆ. ಸೋಮವಾರ ಮಳೆ ಬಿಡುವು ಕೊಟ್ಟಿರುವುದರಿಂದ ಶಿರಾಡಿ ಘಾಟಿ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ದಿನದ 24 ತಾಸು ಕೂಡ ವಾಹನ ಸಂಚಾರ ಸೋಮವಾರದಿಂದಲೇ ಆರಂಭವಾಗಿದೆ.
ಭಾರೀ ಮಳೆಗೆ ಮಣ್ಣು ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸಂಪಾಜೆ-ಮಡಿಕೇರಿ ನಡುವೆ ರಾತ್ರಿ ಹೇರಲಾಗಿದ್ದ ನಿರ್ಬಂಧ ಸೋಮವಾರ ಬೆಳಗ್ಗೆ ಮುಕ್ತಾಯಗೊಂಡಿದ್ದು, ಸೋಮವಾರ ರಾತ್ರಿ ಮತ್ತೆ ಸಂಚಾರ ಪುನರಾರಂಭಗೊಂಡಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಕರ್ತೋಜಿ ಎಂಬಲ್ಲಿ ಭೂಕುಸಿತವಾಗುವ ಸಾಧ್ಯತೆ ಇದ್ದುದರಿಂದ ಮುಂಜಾಗ್ರತೆ ಕ್ರಮವಾಗಿ ಜು.19ರಿಂದ 22ರ ವರೆಗೆ ರಾತ್ರಿ 8ರಿಂದ ಬೆಳಗ್ಗೆ 6ರ ವರೆಗೆ ಎಲ್ಲ ರೀತಿಯ ವಾಹನ ಸಂಚಾರ నిರ್ಬಂಧಿಸಿ ಕೊಡಗು ಜಿಲ್ಲಾಧಿಕಾರಿ ಆದೇಶಿಸಿದ್ದರು. ಸೋಮವಾರ ರಾತ್ರಿ ವಾಹನ ಸಂಚಾರ ಪುನರಾರಂಭಗೊಂಡಿದೆ. ಕರ್ತೋಜಿಯಲ್ಲಿ ಮಣ್ಣು ಕುಸಿತವಾದ ಪ್ರದೇಶದಲ್ಲಿ ಮುಂಜಾಗ್ರತೆ ಮುಂದುವರಿಸಲಾಗಿದ್ದು, ಪೊಲೀಸ್ ನಿಯೋಜಿಸಲಾಗಿತ್ತು.