ಮೂಡುಬಿದಿರೆ: ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿ ಸಾವು - ಗ್ಯಾಸ್‌ಗೀಸರ್ ವಿಷಾನಿಲ ಸೋರಿಕೆಯಾಗಿ ಘಟನೆ
Monday, July 29, 2024
ಮೂಡುಬಿದಿರೆ: ಸ್ನಾನ ಮಾಡಲೆಂದು ಬಾತ್‌ರೂಮ್‌ಗೆ ಪ್ರವೇಶಿಸಿದ್ದ ಯುವಕನೊಬ್ಬ ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ರವಿವಾರ ರಾತ್ರಿ ಕೋಟೆಬಾಗಿಲಿನಲ್ಲಿ ನಡೆದಿದೆ.
ಕೋಟೆಬಾಗಿಲಿನ ಫ್ಲ್ಯಾಟೊಂದರ ನಿವಾಸಿ ಶಾರಿಕ್ (18) ಮೃತಪಟ್ಟ ಯುವಕ.
ಶಾರಿಕ್ ರವಿವಾರ ರಾತ್ರಿ ಸ್ನಾನ ಮಾಡಲೆಂದು ಬಾತ್‌ರೂಮ್‌ಗೆ ತೆರಳಿದ್ದರು. ಬಹಳ ಹೊತ್ತಾದರೂ ಶಾರಿಕ್ ಹೊರಬಾರದ ಹಿನ್ನೆಲೆಯಲ್ಲಿ ಮನೆಯವರು ಅವರನ್ನು ಕರೆದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಬಾತ್‌ರೂಮ್ ಬಾಗಿಲು ಒಡೆದು ನೋಡಿದಾಗ ಶಾರಿಕ್ ವಿಷಾನಿಲ ಸೇವಿಸಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಸಂಪೂರ್ಣ ಮುಚ್ಚಿದ್ದ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್ ವಿಷಾನಿಲ ಹೊರಗಡೆ ಹೋಗದೆ, ಅದನ್ನು ಸೇವಿಸಿದ್ದರಿಂದ ಶಾರಿಕ್ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಶಾರಿಕ್ ದ್ವಿತೀಯ ಪಿಯುಸಿ ಮುಗಿಸಿದ್ದು, ಮೂಡುಬಿದಿರೆಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶಾತಿ ಪಡೆದಿದ್ದರು ಎಂದು ತಿಳಿದುಬಂದಿದೆ.