MANGALORE: ಚಡ್ಡಿಗ್ಯಾಂಗ್ ಆರೋಪಿಗಳು ಪರಾರಿಗೆ ಯತ್ನ - ಶೂಟ್ ಔಟ್!
Wednesday, July 10, 2024
ಮಂಗಳೂರು: ನಗರದಲ್ಲಿ ದರೋಡೆ ಮಾಡಿದ ಚಡ್ಡಿಗ್ಯಾಂಗ್‌ನ ಆರೋಪಿಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಪರಾರಿಗೆ ಯತ್ನಿಸಿದ ಇಬ್ಬರು ಆರೋಪಿಗಳಿಗೆ ಪೊಲೀಸರು ಶೂಟ್ ಔಟ್ ಮಾಡಿದ ಘಟನೆ ನಗರದ ಮುಲ್ಕಿ ಸಮೀಪದ ಪಡು ಪಣಂಬೂರು ಬಳಿ ನಡೆದಿದೆ.
ಮಂಗಳವಾರ ನಸುಕಿನ ವೇಳೆ ಚಡ್ಡಿಗ್ಯಾಂಗ್‌ನ ನಾಲ್ವರಿದ್ದ ತಂಡ ಮಂಗಳೂರಿನ ಕೋಟೆಕಣಿಯ ಮನೆಯೊಂದಕ್ಕೆ ನುಗ್ಗಿ ದಂಪತಿಯನ್ನು ಬೆದರಿಸಿ 14ಲಕ್ಷ ಮೌಲ್ಯದ ಸೊತ್ತು ದರೋಡೆ ಮಾಡಿ ಪರಾರಿಯಾಗಿತ್ತು. ಬಳಿಕ ಕಾರನ್ನು ಮುಲ್ಕಿ ಬಳಿ ಬಿಟ್ಟು, ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಮತ್ತೆ ಮಂಗಳೂರಿಗೆ ಬಂದು ಬೆಂಗಳೂರಿಗೆ ಪರಾರಿಯಾಗಲೆತ್ನಿಸಿತ್ತು. ಅಷ್ಟರಲ್ಲಿ ಅಲರ್ಟ್ ಆದ ಪೊಲೀಸರು ಸಕಲೇಶಪುರ ಮಾರ್ಗದಲ್ಲಿದ್ದ ಬಸ್ ಅನ್ನು ತಡೆದು ನಿಲ್ಲಿಸಿ ಬಂಧಿಸಿತ್ತು.
ಅದರಂತೆ ಇಂದು ಸ್ಥಳ ಮಹಜರು ನಡೆಸಲು ಮಂಗಳೂರಿನಿಂದ ಆರೋಪಿಗಳನ್ನು ಮುಲ್ಕಿ ಕಡೆಗೆ ಪೊಲೀಸರು ಕರೆದೊಯ್ಯುತ್ತಿದ್ದರು. ಈ ವೇಳೆ ರಾಜು ಸಿಂಗ್ವಾನಿಯ(24) ಹಾಗೂ ಬಾಲಿ(22) ಎಂಬಿಬ್ಬರು ಆರೋಪಿಗಳು ಪೊಲೀಸರನ್ನು ತಳ್ಳಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಬಳಿಕ ಇಬ್ಬರ ಕಾಲಿಗೆ ಗುಂಡಿಕ್ಕಿದ್ದಾರೆ. ಸದ್ಯ ಗಾಯಾಳು ಆರೋಪಿಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು ತಳ್ಳಿರುವ ಪರಿಣಾಮ ಇಬ್ಬರು ಪೊಲೀಸರಿಗೂ ಗಾಯವಾಗಿದ್ದು, ಅವರನ್ನು ನಗರದ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.