ಮಂಗಳೂರು: ಜೈಲಿಗೆ ಪೊಲೀಸ್ ದಿಢೀರ್ ದಾಳಿ- ಗಾಂಜಾ, ಡ್ರಗ್ಸ್ ಪ್ಯಾಕೆಟ್, ಮೊಬೈಲ್‌ಗಳು ವಶಕ್ಕೆ
Thursday, July 25, 2024
ಮಂಗಳೂರು: ನಗರ ಪೊಲೀಸ್ ತಂಡ ಗುರುವಾರ ಬೆಳ್ಳಂಬೆಳಗ್ಗೆ ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿ ಗಾಂಜಾ, ಡ್ರಗ್ಸ್, ಮೊಬೈಲ್ ಫೋನ್ ಗಳು ಸೇರಿದಂತೆ ಹಲವಾರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ನಗರ ಪೊಲೀಸರು ಮುಂಜಾನೆ 4ಗಂಟೆ ವೇಳೆಗೆ ಮಂಗಳೂರಿನ ಜಿಲ್ಲಾ ಕಾರಾಗೃಹದ ಬ್ಯಾರಕ್ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಪಿಐಗಳು ಸೇರಿದಂತೆ ಸುಮಾರು 150ಮಂದಿ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜೈಲಿನ ಎಲ್ಲಾ ಬ್ಲಾಕ್‌ಗಳನ್ನು ಏಕಕಾಲದಲ್ಲಿ ಸುತ್ತುವರಿಯಲು ಹಲವಾರು ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿಯಲಾಗಿದೆ. ಕೊನೆಯ ಕ್ಷಣದವರೆಗೂ ದಾಳಿಯ ಗೌಪ್ಯತೆಯನ್ನು ಕಾಪಾಡಲಾಗಿತ್ತು.
ಕಾರ್ಯಾಚರಣೆ ಸಂದರ್ಭದಲ್ಲಿ 25 ಮೊಬೈಲ್ ಫೋನ್‌ಗಳು, 1 ಬ್ಲೂಟೂತ್ ಸಾಧನ, 5 ಇಯರ್‌ಫೋನ್‌ಗಳು, 1 ಪೆನ್ ಡ್ರೈವ್, 5 ಚಾರ್ಜರ್‌ಗಳು, 1 ಜೊತೆ ಕತ್ತರಿ, 3 ಕೇಬಲ್‌ಗಳು ಮತ್ತು ಗಾಂಜಾ ಮತ್ತು ಇತರ ಡ್ರಗ್ಸ್‌ಗಳ ಹಲವಾರು ಪ್ಯಾಕೆಟ್‌ಗಳು ಪತ್ತೆಯಾಗಿದೆ. ಈ ವಸ್ತುಗಳು ಜೈಲಿಗೊಳಗೆ ಹೇಗೆ ತರಲಾಗಿದೆ ಎಂಬುದರ ಬಗಯ ತನಿಖೆಗಳು ನಡೆಸಲಾಗುತ್ತಿದೆ.