Putturu: ಅರ್ಧ ದರಕ್ಕೆ ಚಿನ್ನ ನೀಡುವುದಾಗಿ ವಂಚನೆಯ ಕರೆ: ಎಚ್ಚೆತ್ತ ಯುವಕ
ಮಂಗಳೂರು: ಹುಬ್ಬಳ್ಳಿಯಿಂದ ಅಪರಿಚಿತ ವ್ಯಕ್ತಿಯೋರ್ವ ಕುಂಬ್ರದ ಯುವಕನಿಗೆ ಕರೆ ಮಾಡಿ ಹಳೆಯ ಕಾಲದ ಚಿನ್ನ ಸಿಕ್ಕಿದ್ದು, ಅರ್ಧ ದರಕ್ಕೆ ಮಾರಾಟ ಮಾಡುವುದಾಗಿ ದೂರವಾಣಿ ಕರೆ ಮಾಡಿ ಕಾರು ಮಾಡಿಕೊಂಡು ಊರಿಗೆ ಬನ್ನಿ ಎಂದು ಯಾಮಾರಿಸಲು ಯತ್ನಿಸಿದ ಘಟನೆ ನಡೆದಿದೆ.
ಕುಂಬ್ರದ ಕಾರ್ ಡೀಲರ್ ಎಂ.ಎಂ ಸರ್ಫುದ್ದೀನ್ ಅವರಿಗೆ ಈ ಕರೆ ಬಂದಿದೆ. ಈ ಹಿಂದೆ ಬೆಳ್ತಂಗಡಿ ಮೂಲದ ಮೂವರು ಇದೇ ಮಾದರಿಯ ಕರೆಯಿಂದ ಚಿನ್ನಾಭರಣದ ಆಸೆಗಾಗಿ ಪ್ರಾಣ ಕಳೆದುಕೊಂಡ ಘಟನೆ ಬಗ್ಗೆ ಅರಿವಿದ್ದ ಸರ್ಫುದ್ದೀನ್ ಕರೆಯನ್ನು ದಾಖಲಿಸಿಕೊಂಡು ಜಾಲ ತಾಣದ ಮೂಲಕ ಹರಿಯಬಿಟ್ಟಿದ್ದಾರೆ.
ಪಾಯ ತೆಗೆಯುವಾಗ ಚಿನ್ನ!
ಅಪರಿಚಿತ ವ್ಯಕ್ತಿ ನಾನು ನಿಮ್ಮ ಸೆಕೆಂಡ್ ಹ್ಯಾಂಡ್ ವೆಹಿಕಲ್ ಶೋರೂಂನಿಂದ ಬೈಕ್ ಖರೀದಿಸಿದ ಗ್ರಾಹಕ ಎಂದು ಸರ್ಫುದ್ದೀನ್ ಬಳಿ ಪರಿಚಯಿಸಿಕೊಂಡಿದ್ದ. ಮನೆ ಕಟ್ಟಲು ಪಾಯ ತೆಗೆಯುವ ವೇಳೆ ನನ್ನ ಅಜ್ಜ-ಅಜ್ಜಿಗೆ 6 ಕೆ.ಜಿ. ಹಳೆಯ ಚಿನ್ನದ ನಾಣ್ಯ ಸಿಕ್ಕಿದೆ. ಅದನ್ನು ಅವರು ಮಾರಾಟ ಮಾಡುವಂತೆ ನನ್ನ ಬಳಿ ಹೇಳಿದ್ದಾರೆ. 1 ಕೆ.ಜಿ. ಚಿನ್ನಕ್ಕೆ 30 ಲಕ್ಷ ರೂ. ಇದ್ದು ಅರ್ಧ ಬೆಲೆಗೆ ನಾನು ನಿನಗೆ ತೆಗೆಸಿಕೊಡುತ್ತೇನೆ. ನೀನು ಊರಿಗೆ ತೆರಳಿ ಪರಿಶೀಲಿಸಿದ ಬಳಿಕವೇ ಹಣ ಕೊಟ್ಟರೆ ಸಾಕು ಎಂದೂ ತಿಳಿಸಿದ್ದ.
ಈ ವೇಳೆ ಸರ್ಫುದ್ದೀನ್ ಶೋರೂಂನಿಂದ ಖರೀದಿಸಿದ ಬೈಕ್ ಯಾವುದು ಎಂದು ಪ್ರಶ್ನಿಸಿದ್ದು, ಇದಕ್ಕೆ ಆತ ಸಮರ್ಪಕ ಉತ್ತರ ನೀಡಿಲ್ಲ. ಇದರಿಂದ ಅಪರಿಚಿತನ ಮೋಸದ ವ್ಯವಹಾರ ಬೆಳಕಿಗೆ ಬಂದಿದೆ.
ಕಾರಲ್ಲೇ ಸುಟ್ಟ ಪ್ರಕರಣ
ಕೆಲವು ತಿಂಗಳ ಹಿಂದೆ ಚಿನ್ನಾಭರಣ ಗಳು ಸಿಕ್ಕಿವೆ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂಬ ಆಸೆ ತೋರಿಸಿ ಬೆಳ್ತಂಗಡಿಯ ಮೂವರನ್ನು ತುಮಕೂರಿಗೆ ಕರೆಸಿಕೊಂಡ ವಂಚಕರು ಅವರನ್ನು ಕೊಲೆ ಮಾಡಿ ಕಾರು ಸಮೇತ ಸುಟ್ಟು ಹಾಕಿದ್ದರು.
Photo- AI |