ಮಂಗಳೂರು: ಕುಸಿತಗೊಂಡ ಬಂಗ್ರಕೂಳೂರು ಎ.ಜೆ.ಇಂಜಿನಿಯರಿಂಗ್ ಕಾಲೇಜು ರಸ್ತೆ - ಮತ್ತಷ್ಟು ಕುಸಿತಯುವ ಭೀತಿ
Tuesday, July 2, 2024
ಮಂಗಳೂರು: ನಗರದ ಬಂಗ್ರಕೂಳೂರಿನ ಎ.ಜೆ.ಇಂಜಿನಿಯರಿಂಗ್ ರಸ್ತೆ ಮಂಗಳವಾರ ಏಕಾಏಕಿ ಕುಸಿತಗೊಂಡಿದೆ. ಇದೀಗ ರಸ್ತೆ ಇನ್ನಷ್ಟು ಕುಸಿತಗೊಳ್ಳುವ ಭೀತಿ ಎದುರಾಗಿದ್ದು, ಸ್ವಲ್ಪ ಸ್ವಲ್ಪವೇ ರಸ್ತೆ ರಾಜಕಾಲುವೆ ಪಾಲಾಗುತ್ತಿರುವುದು ಕಂಡು ಬರುತ್ತಿದೆ.
ವಾರದ ಹಿಂದೆಯೇ ರಸ್ತೆಯಲ್ಲಿ ಬಿರುಕುಬಿಟ್ಟಿತ್ತು. ಆದ್ದರಿಂದ ಸ್ಥಳೀಯ ಕಾರ್ಪೊರೇಟರ್ ಕಿರಣ್ ಕುಮಾರ್ ಅವರು ಮೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಕಂಬಗಳನ್ನು ಶಿಫ್ಟ್ ಮಾಡಿಸಿದ್ದರು. ಮಳೆ ಸ್ವಲ್ಪ ಕಡಿಮೆಯಿದ್ದರೂ ರಾಜಕಾಲುವೆಯಲ್ಲಿ ನೀರಿನ ಹರಿವು ಇದ್ದ ಕಾರಣ ಇಂದು ಬೆಳಗ್ಗೆ ರಸ್ತೆ 50 ಮೀಟರ್‌ನಷ್ಟು ಭಾಗ ಬಾಯ್ತೆರೆದು ನಿಂತಿದೆ. ರಸ್ತೆ ಇನ್ನಷ್ಟು ಕುಸಿಯದಂತೆ ಮರಳುಚೀಲಗಳನ್ನು ಇಡಲಾಗಿದೆ. ಆದರೂ ರಸ್ತೆ ಇನ್ನಷ್ಟು ಕುಸಿತಗೊಳ್ಳುವ ಭೀತಿಯಿದೆ. ರಾಜಕಾಲುವೆಗೆ ಕಟ್ಟಿರುವ ತಡೆಗೋಡೆ ಹಳೆದಾಗಿದ್ದರಿಂದ ಈ ರಸ್ತೆ ಕುಸಿತಗೊಂಡಿದೆ ಎನ್ನಲಾಗುತ್ತಿದೆ.
ಕುಸಿತಗೊಂಡ ರಸ್ತೆಯಲ್ಲಿ ಯಾರೂ ಹೋಗದಂತೆ ಹಗ್ಗ ಕಟ್ಟಿ ತಡೆ ಹಾಕಲಾಗಿದೆ. ಈ ರಸ್ತೆಯನ್ನೇ ಸಂಪರ್ಕ ರಸ್ತೆಯಾಗಿ ಅವಲಂಬಿಸಿರುವ ಸುಮಾರು 10 ಮನೆಗಳಿದೆ. ಅವರಿಗೆ ತಾತ್ಕಾಲಿಕವಾಗಿ ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ಅದೃಷ್ಟವಶಾತ್ ಸದ್ಯದ ಮಟ್ಟಿಗೆ ಯಾವ ಮನೆಗಳಿಗೂ ತೊಂದರೆಯಿಲ್ಲ. ಸ್ಥಳೀಯ ಮನಪಾ ಸದಸ್ಯ ಕಿರಣ್ ಕುಮಾರ್ ಹಾಗೂ ಮನಪಾ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟು ಅನಾಹುತ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.