ಮಂಗಳೂರು: ಶಾಸಕ ಭರತ್ ಶೆಟ್ಟಿ ಗಂಡುಮಗ ಹೌದಾದರೆ ಕಾಂಗ್ರೆಸ್ ಕಾರ್ಯಕರ್ತರ ಕೆನ್ನೆಗೆ ಹೊಡೆಯಲಿ ನೋಡುವ - ರಮಾನಾಥ ರೈ ಸವಾಲು
Tuesday, July 9, 2024
ಮಂಗಳೂರು: ಶಾಸಕ ಭರತ್ ಶೆಟ್ಟಿಗೆ ತಾಕತ್ತಿದ್ದರೆ, ಗಂಡುಮಗನೇ ಹೌದಾದಲ್ಲಿ ರಾಹುಲ್ ಗಾಂಧಿಯವರಿಗಲ್ಲ, ಕಾಂಗ್ರೆಸ್‌ನ ಒಬ್ಬ ಕಾರ್ಯಕರ್ತನ ಕೆನ್ನೆಗೆ ಹೊಡೆಯಲಿ ನೋಡುವಾ ಎಂದು ಮಾಜಿ ಸಚಿವ ರಮಾನಾಥ ರೈ ಸವಾಲೆಸೆದರು.
ವಿರೋಧಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಿಂದೂ ವಿರೋಧಿ ಭಾಷಣ ಮಾಡಿದ್ದಾರೆಂದು ಆಪಾದಿಸಿ ನಡೆಸಿರುವ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿಯವರು, ರಾಹುಲ್ ಗಾಂಧಿಗೆ ಕಪಾಳಮೋಕ್ಷ ಮಾಡಬೇಕೆಂದು ಸೋಮವಾರ ಹೇಳಿಕೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಶಾಸಕ ಭರತ್ ಶೆಟ್ಟಿ ವಿರುದ್ಧ ಸರಕಾರ ಸುಮೋಟೋ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದರು.
ಸಂಸತ್ತಿನ ವಿಪಕ್ಷ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿಯವರು ದೇಶಕ್ಕಾಗಿ ಪ್ರಾಣ ತೆತ್ತಿರುವ ಮನೆತನದ ಮಗ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ಕೆಟ್ಟದಾಗಿ ಪ್ರತಿಬಿಂಬಿಸುವ ಪ್ರಯತ್ನ ಬಿಜೆಪಿಯಿಂದ ಆಗುತ್ತಿದೆ. ಭರತ್ ಶಾಸಕನಾಗಲು ನಾಲಾಯಕ್. ಯೋಗ್ಯತೆ ಇಲ್ಲದ ಮನುಷ್ಯ. ಜೆಡಿಎಸ್ ನಾಯಕ ಅಮರನಾಥ್ ಶೆಟ್ಟಿಯವರ ಕೃಪಾಕಟಾಕ್ಷದಿಂದ ರಾಜಕೀಯದಲ್ಲಿ ಮೇಲೆ ಬಂದ ಬಳಿಕ ಅವರಿಗೂ ಎಲ್ಲಾ ರೀತಿಯಲ್ಲಿ ಕೈ ಕೊಟ್ಟಿದ್ದಾನೆ. ರಾಹುಲ್ ಗಾಂಧಿ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ ಮಾತನಾಡಿರುವುದು, ಹುಚ್ಚ ಎಂದು ಹೇಳಿರುವುದು ಆತನಿಗೆ ಶೋಭೆ ತರುವುದಿಲ್ಲ. ಹುಚ್ಚ ಯಾರೆಂದು ಅವರ ನಾಯಕರ ಕಟೌಟ್‌ನಲ್ಲಿ ವೇಷ ಭೂಷಣ ನೋಡಿದಾಗ ತಿಳಿಯುತ್ತೆ ಎಂದು ರಮಾನಾಥ ರೈ ತೀವ್ರ ವಾಗ್ದಾಳಿ ನಡೆಸಿದರು.