-->
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 14ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 14ಸಾವಿರ ಹುದ್ದೆಗಳ ಭರ್ತಿಗೆ ಕ್ರಮ


ಬೆಂಗಳೂರು: ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಟ್ಟು 34,967 ಮಂಜೂರಾತಿ ಹುದ್ದೆಗಳಿದೆ.  ಈ ಪೈಕಿ 14,523 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತಹಂತವಾಗಿ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಮುಖ್ಯ ನ್ಯಾಯಮೂರ್ತಿ ಎನ್. ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಈ ಬಗ್ಗೆ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಸರ್ಕಾರದ ಹೇಳಿಕೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಹೇಳಿಕೆಯಲ್ಲಿ ಏನಿದೆ?: 'ವೈದ್ಯಾಧಿಕಾರಿಗಳು, ತಜ್ಞರು, ದಂತ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿ, ನರ್ಸಿಂಗ್ ಅಧಿಕಾರಿಗಳು ಹಾಗೂ ಡಿ ಗ್ರೂಪ್ ನೌಕರರೂ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆ 34.967ರಷ್ಟಿದ್ದು, ಇದರಲ್ಲಿ 20,444 ಹುದ್ದೆಗಳು ಭರ್ತಿಯಾಗಿವೆ ಎಂದು ತಿಳಿಸಲಾಗಿದೆ.

14,523 ಹುದ್ದೆಗಳು ಖಾಲಿ ಇದ್ದು, ಹೊರಗುತ್ತಿಗೆ, ಸರ್ಕಾರಿ ಗುತ್ತಿಗೆ, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ 16,501 ಹುದ್ದೆಗಳ ಕಾರ್ಯ ನಿರ್ವಹಣೆಯಾಗು- ತ್ತಿದೆ. ಗ್ರಾಮೀಣ ಕಡ್ಡಾಯ ಸೇವೆಯಡಿ 2,371 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. 204 ಕಿರಿಯ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. 413 ಹುದ್ದೆಗಳ ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. 498 ಫಾರ್ಮಸಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 705 ಹುದ್ದೆಗಳ

ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಖಾಲಿ ಇರುವ 10.253 ಡಿ ಗ್ರೂಪ್ ಹುದ್ದೆಗಳಲ್ಲಿ ಶೇ 75ರಷ್ಟು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ' ಎಂದು ವಿವರಿಸಲಾಗಿದೆ.

ಸರ್ಕಾರದ ಹೇಳಿಕೆಗೆ ಪ್ರತಿಯಾಗಿ ಪ್ರಕರಣದ (ನ್ಯಾಯಾಲಯಕ್ಕೆ ಅಮಿಕಸ್ ಕ್ಯೂರಿ ಸಹಕರಿಸುವ ವಕೀಲ) ಶ್ರೀಧರ ಪ್ರಭು, 'ಸರ್ಕಾರ 2,371 ವೈದ್ಯರು ಗ್ರಾಮೀಣ ಕಡ್ಡಾಯ ಸೇವೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದೆ. ಆದರೆ, ಗ್ರಾಮೀಣ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಿ ಇದಕ್ಕೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವೈದ್ಯಕೀಯ ಸೇವೆಯ ಮೇಲೆ ಪರಿಣಾಮ ಬೀರಲಿದೆ' ಎಂದರು.

ಸರ್ಕಾರದ ಹೇಳಿಕೆಯನ್ನು ದಾಖಲಿಸಿ ಕೊಂಡ ನ್ಯಾಯಪೀಠ ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಿದೆ.

Ads on article

Advertise in articles 1

advertising articles 2

Advertise under the article