ಭಯಾನಕ: ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿ:ಆರು ಮಕ್ಕಳು ಸೇರಿ 7 ಮಂದಿ ಸಾವು , 26 ಜನ ಗಾಯ
Wednesday, August 28, 2024
ಉತ್ತರ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿಯ ಬಹೆಚ್ ಜಿಲ್ಲೆಯ ಮಹಾಸಿಬ್ಲಾಕ್‌ನ 30 ಗ್ರಾಮಗಳಲ್ಲಿ ತೋಳಗಳ ಗುಂಪು ಆರು ಮಕ್ಕಳು ಸೇರಿದಂತೆ ಏಳು ಜನರನ್ನು ಕೊಂದಿದೆ. 26 ಜನರು ಗಾಯಗೊಂಡಿದ್ದಾರೆ.
ಅರಣ್ಯ ಇಲಾಖೆಯು ತೋಳಗಳನ್ನು ಸೆರೆಹಿಡಿಯಲು ಒಂಭತ್ತು ಜನರ ತಂಡವೊಂದನ್ನು ನಿಯೋಜಿಸಿದೆ.
ಕಳೆದೊಂದು ತಿಂಗಳಿನಿಂದಲೂ ಪ್ರದೇಶದಲ್ಲಿ ತೋಳಗಳು ಆಗಾಗ್ಗೆ ದಾಳಿಗಳನ್ನು ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿಸಿದ್ದು, ನಿದ್ರೆರಹಿತ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ರಾತ್ರಿ ಸರದಿಗಳಲ್ಲಿ ಕಾವಲು ಕಾಯುತ್ತಿದ್ದಾರೆ.
ಅರಣ್ಯ ಅಧಿಕಾರಿಗಳು ಈವರೆಗೆ ಮೂರು ತೋಳಗಳನ್ನು ಸೆರೆಹಿಡಿದು ಲಕ್ಷ್ಮಿ ಮೃಗಾಲಯಕ್ಕೆ ರವಾನಿಸಿದ್ದಾರೆ. ಅರಣ್ಯ ಇಲಾಖೆಯು ಥರ್ಮಲ್ ಡೋನ್ ಗಳು ಸೇರಿದಂತೆ ವಿವಿಧ ತಂತ್ರಜ್ಞಾನಗಳೊಂದಿಗೆ ತೋಳಗಳ ಗುಂಪುಗಳ ಮೇಲೆ ನಿಗಾಯಿರಿಸಿದೆ. ತೋಳಗಳು ಸಕ್ರಿಯವಾಗಿರುವ ಪ್ರದೇಶದಲ್ಲಿ ಆರು ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ನಾಲ್ಕು ಬೋನುಗಳನ್ನು ಇರಿಸಲಾಗಿದೆ.
ಓರ್ವ ವಯಸ್ಕ ಮಹಿಳೆಯ ಸಾವು ಶಂಕಾಸ್ಪದವಾಗಿದೆ, ಆದರೆ ಆರು ಮಕ್ಕಳು ತೋಳಗಳ ದಾಳಿಯಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ತನಿಖಾಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ತೋಳಗಳ ದಾಳಿಯ ಮೊದಲ ಘಟನೆ ಮತ್ತು ಸಂಬಂಧಿತ ಸಾವು ಜು.17ರಂದು ವರದಿಯಾಗಿತ್ತು ಎಂದು ಹಿರಿಯ ಅರಣ್ಯಾಧಿಕಾರಿ ತಿಳಿಸಿದರು.
ಗುಂಪಿನಲ್ಲಿ ಐದಾರು ತೋಳಗಳಿದ್ದು, ಕೇವಲ ಮಾನವರ ಮೇಲೆ ದಾಳಿಗಳನ್ನು ನಡೆಸುತ್ತಿವೆ ಎನ್ನಲಾಗಿದೆ. 20 ವರ್ಷಗಳ ನಂತರ ತೋಳಗಳು ಈ ಪ್ರದೇಶಕ್ಕೆ ಮರಳಿವೆ. 2004ರಲ್ಲಿ ಸುಮಾರು 32 ಮಕ್ಕಳು ತೋಳಗಳ ದಾಳಿಗಳಲ್ಲಿ ಮೃತಪಟ್ಟಿದ್ದರು. 2020ರಲ್ಲೂ ತೋಳಗಳ ದಾಳಿಗಳು ವರದಿಯಾಗಿದ್ದವು.