ಬೆಂಗಳೂರು, ಮಂಗಳೂರು ಸಹಿತ 75 ನರ್ಸಿಂಗ್ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ನಿರ್ಬಂಧ
Sunday, August 11, 2024
ಬೆಂಗಳೂರು: ಅಗತ್ಯ ಬೋಧಕ ಸಿಬ್ಬಂದಿ, ಮೂಲಸೌಕರ್ಯಗಳ ಕೊರತೆಯಿರುವ 75 ಖಾಸಗಿ ನರ್ಸಿಂಗ್ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷ ಪ್ರವೇಶ ನೀಡಬಾರದೆಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಖಡಕ್ ವಾರ್ನಿಂಗ್ ನೀಡಿದೆ.
ಭಾರತೀಯ ನರ್ಸಿಂಗ್ ಪರಿಷತ್ತಿನ ಮಾರ್ಗಸೂಚಿ ಅನುಸರಿಸದ ಬೆಂಗಳೂರಿನ 32, ಮೈಸೂರು, ಮಂಗಳೂರು, ಕಲಬುರಗಿ ಜಿಲ್ಲೆಗಳ ಒಟ್ಟು 43 ಕಾಲೇಜುಗಳಿಗೆ 2024-25ನೇ ಸಾಲಿನ ಪ್ರವೇಶ ನೀಡಬಾರದು ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪತ್ರ ಬರೆದಿದ್ದಾರೆ.
ನರ್ಸಿಂಗ್ ಕಾಲೇಜುಗಳು 100 ಹಾಸಿಗೆಗಳ ಆಸ್ಪತ್ರೆ, 100 ವಿದ್ಯಾರ್ಥಿಗಳಿಗೆ ಅಗತ್ಯವಾದ ಬೋಧಕ ಸಿಬ್ಬಂದಿ ಹೊಂದಿರಬೇಕು. ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಹೊಂದಿರಬೇಕು. ಆದರೆ, ಕೆಲ ಖಾಸಗಿ ನರ್ಸಿಂಗ್ ಕಾಲೇಜುಗಳು ಮಾನದಂಡಗಳನ್ನು ಉಲ್ಲಂಘಿಸಿವೆ. ಹಾಗಾಗಿ, ಪ್ರವೇಶ ನೀಡದಂತೆ ಸೂಚಿಸಲಾಗಿದೆ' ಎಂದು ಕುಲಪತಿ ಎಂ.ಕೆ. ರಮೇಶ್ ಹೇಳಿದರು.
ರಾಜ್ಯದಲ್ಲಿ 615 ನರ್ಸಿಂಗ್ ಕಾಲೇಜುಗಳಿವೆ. 2023-24ನೇ ಸಾಲಿನಿಂದ ಶೇ. 80ರಷ್ಟು ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಂಚಿಕೆ ಮಾಡುತ್ತಿದೆ. ಶೇ 20 ಸೀಟುಗಳನ್ನು ಆಡಳಿತ ಮಂಡಳಿಗೆ ನೀಡಲಾಗಿದೆ.