ಮುಡಾ ಪ್ರಕರಣ: CM ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮೋದನೆ
ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಭೂಮಿ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ನಿರ್ಧಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ಮೂಲಕ ಸೈಟ್‌ಗಳನ್ನು ನೀಡಿದ ಕುರಿತು ತನಿಖೆಯನ್ನು ಆರಂಭಿಸಲು ಅವಕಾಶ ನೀಡುತ್ತದೆ.
ಈ ಅನೇಕ ಆರೋಪಗಳನ್ನು ಆಧರಿಸಿ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಜಾರ್ಜ್, ಪ್ರದೀಪ್ ಕುಮಾರ್ ಎಸ್.ಪಿ., ಮತ್ತು ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರನ್ನು ಸಂಪರ್ಕಿಸಿ, ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಸಂಬಂಧ ರಾಜ್ಯಪಾಲರು 2024ರ ಆಗಸ್ಟ್ 17ರಂದು ಅನುಮತಿ ನೀಡಿದ್ದು, ಇದು ಭ್ರಷ್ಟಾಚಾರ ನಿಷೇಧ ಕಾಯ್ದೆಯ 17ಎ ಕಲಂ ಅಡಿಯಲ್ಲಿ ಅನುಮೋದಿತವಾಗಿದೆ.
ಈ ಪ್ರಕರಣದಲ್ಲಿ, ವಿಧಾನಸಭಾ ವಿರೋಧ ಪಕ್ಷಗಳು ಮುಖ್ಯಮಂತ್ರಿ ರಾಜೀನಾಮೆಯನ್ನು ಆಗ್ರಹಿಸುತ್ತಿದ್ದು, ಇದು ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ದಿನೇಶ್ ಅಮೀನ್ ಮಟ್ಟು ಅವರು ಫೇಸ್‌ಬುಕ್ ಪೋಸ್ಟ್ ನಲ್ಲಿ ಹಾಕಿದ ಮಾಹಿತಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ನಂತರ ಏನಾಗಬಹುದೆಂಬುದನ್ನು ಐದು ಪ್ರಶ್ನೆಗಳಿಗೆ ನೀಡುವ ಉತ್ತರದ ಮೂಲಕ ವಿವರಿಸಲು ಪ್ರಯತ್ನಿಸಿದ್ದೇನೆ. ಪ್ರಶ‍್ನೆ 1 : ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟನಂತರ ಏನಾಗುತ್ತೆ? ಉತ್ತರ: ಅರ್ಜಿದಾರರು ಪ್ರಾಸಿಕ್ಯೂಷನ್ ಅನುಮತಿಯನ್ನು ಹಿಡಿದುಕೊಂಡು ಸೆಷನ್ಸ ನ್ಯಾಯಾಲಯಕ್ಕೆ ಹೋಗಿ ತನಿಖೆಗೆ ಆದೇಶ ನೀಡುವಂತೆ ಕೋರುತ್ತಾರೆ. ನ್ಯಾಯಾಲಯ ಅರ್ಜಿದಾರರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಕೋರಿಕೆಯನ್ನು ಪುರಸ್ಕರಿಸಬಹುದು ಇಲ್ಲವೇ ತಿರಸ್ಕರಿಸಬಹುದು. ಪುರಸ್ಕರಿಸಿದರೆ ಪೊಲೀಸರಿಗೆ ಇಲ್ಲವೇ ಲೋಕಾಯುಕ್ತರಿಗೆ ತನಿಖೆಯನ್ನು ಒಪ್ಪಿಸಬಹುದು. ಪ್ರಶ್ನೆ-2 : ಅಷ್ಟಕ್ಕೆ ಮುಗಿದುಹೋಗುತ್ತಾ? ಮುಖ್ಯಮಂತ್ರಿಗಳ ಮುಂದೆ ಬೇರೆ ಆಯ್ಕೆ ಇರೋದಿಲ್ವಾ? ಉತ್ತರ: ಖಂಡಿತ ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಮುಖ್ಯಮಂತ್ರಿಗಳು ಹೈಕೋರ್ಟ್ ನಲ್ಲಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುತ್ತಾರೆ. ಅಲ್ಲಿಯೂ ಪ್ರಾಸಿಕ್ಯೂಷನ್ ಅನುಮತಿಯನ್ನು ಪುರಸ್ಕರಿಸಿದರೆ, ಪ್ರಕರಣ ಖಂಡಿತ ಸುಪ್ರೀಂ ಕೋರ್ಟ್ ಗೆ ಹೋಗಬಹುದು.. ಸುಪ್ರೀಂ ಕೋರ್ಟ್ ಕೂಡಾ ಪ್ರಾಸಿಕ್ಯೂಷನ್ ಅನುಮತಿಯನ್ನು ಪುರಸ್ಕರಿಸಿದರೆ ಪೊಲೀಸ್ ಇಲ್ಲವೇ ಲೋಕಾಯುಕ್ತದಿಂದ ತನಿಖೆ ಶುರುವಾಗುತ್ತದೆ. ಪ್ರಶ್ನೆ-3: ಇವೆಲ್ಲ ಮುಗಿದುಹೋಗಲು ಎಷ್ಟು ಸಮಯ ಬೇಕಾಗಬಹುದು. ಉತ್ತರ: ಈ ಕಾನೂನಿನ ಪ್ರಕ್ರಿಯೆ ಮುಗಿಯಲು ಎಷ್ಟು ಕಾಲ ಆಗಬಹುದು ಎನ್ನುವುದು ನ್ಯಾಯಾಲಯಗಳಿಗೆ ಬಿಟ್ಟ ವಿಚಾರ. ಆದರೆ 2011ರಲ್ಲಿ ಬಿ.ಎಸ್ ಯಡಿಯೂರಪ್ಪನವರು ಮತ್ತು ಅವರ ಮಕ್ಕಳಿಗೆ ಸಂಬಂಧಿಸಿದ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕ ಹತ್ತು ತಿಂಗಳುಗಳ ನಂತರ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಪ್ರಶ್ನೆ-4: ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತರ ಯಡಿಯೂರಪ್ಪನವರು ರಾಜೀನಾಮೆ ನೀಡಿದ್ರಾ? ಉತ್ತರ : ಖಂಡಿತ ಇಲ್ಲ. ಯಡಿಯೂರಪ್ಪನವರ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದು 2011ರ ಜನವರಿ 29ರಂದು. ಲೋಕಾಯುಕ್ತ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು 2011ರ ಅಕ್ಟೋಬರ್ 14ಂದು. ಯಡಿಯೂರಪ್ಪನವರು ಬಂಧನಕ್ಕೀಡಾಗಿದ್ದು 2011ರ ಅಕ್ಟೋಬರ್ 15ರಂದು. ಪ್ರಶ್ನೆ-5: ಆದರೆ ಯಡಿಯೂರಪ್ಪನವರು 2011ರ ಆಗಸ್ಟ್ ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಲ್ಲಾ? ಉತ್ತರ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು 2011ರ ಜುಲೈ ಹನ್ನೊಂದರಂದು ನ್ಯಾ.ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ ನೀಡಿದ ಪ್ರಕರಣದಲ್ಲಿ. ಅವರು ಬಂಧನಕ್ಕೀಡಾಗಿದ್ದು ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಮತ್ತು ಅಕ್ರಮಗಣಿಗಾರಿಕೆ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿ ಆರೋಪಪಟ್ಟಿಯನ್ನು ಸಲ್ಲಿಸಿದ ನಂತರ 2011ರ ಅಕ್ಟೋಬರ್ 15ರಂದು.