ಶಾಲೆಯನ್ನು ಅರ್ಧಕ್ಕೇ ತ್ಯಜಿಸಿದ್ದ ನೈರ್ಮಲ್ಯ ಕಾರ್ಮಿಕೆಯ ಜೀವನಚರಿತ್ರೆಯ ಪುಸ್ತಕ ವಿವಿಗೆ ಪಠ್ಯ
Saturday, August 17, 2024
ತಿರುವನಂತಪುರ : ಶಾಲೆಯನ್ನು ಅರ್ಧಕ್ಕೇ ತ್ಯಜಿಸಿದ್ದ ನೈರ್ಮಲ್ಯ ಕಾರ್ಮಿಕಳೊಬ್ಬರ ಜೀವನಚರಿತ್ರೆ ಕೇರಳದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಹಾಗೂ ಎರಡು ವಿಶ್ವವಿದ್ಯಾನಿಲಯಗಳ ಪದವಿ ತರಗತಿಗಳ ಪಠ್ಯದ ಭಾಗವಾಗಿದೆ.
ತಿರುವನಂತಪುರದ ಸರಕಾರಿ ಕಾರ್ಯಾಲಯದ ಸಮೀಪವಿರುವ ರಾಜಾಜಿನಗರದ (ಚೆಂಕಾಲ್ ಚೂಲಾ ಕಾಲನಿ ಎಂದೇ ಜನಪ್ರಿಯ) ನಿವಾಸಿ ಧನುಜಾ ಕುಮಾರಿ ಬರೆದಿರುವ ಚೆಂಕಲ್ ಚೂಲಾಯಿಲೆ ಎಂದ ಜೀವಿತಂ (ಚೆಂಕಲ್ ಚೂಲಾದಲ್ಲಿ ನನ್ನ ಜೀವನ) ಮಲಯಾಳ ಕೃತಿಯನ್ನು ಕಲ್ಲಿಕೋಟೆ ವಿವಿಯ ಎಂಎ ಹಾಗೂ ಕಣ್ಣೂರು ವಿವಿಯ ಬಿಎ ಪದವಿಯ ಪಠ್ಯದ ಭಾಗವಾಗಿ ಆಯ್ದುಕೊಂಡಿದೆ.
ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿರುವ ಚೆಂಕಾಲ್ ಚೂಲಾ ಕಾಲನಿಯ ನಿವಾಸಿಗಳು ಎದುರಿಸುತ್ತಿರುವ ತಾರತಮ್ಯ, ಅವರ ಬದುಕು ಬವಣೆಗಳನ್ನು ಈ ಕೃತಿಯಲ್ಲಿ ಮನಮುಟ್ಟುವಂತೆ ಬರೆಯಲಾಗಿದೆ. ಅಲ್ಲದೆ ಕೇರಳ ಮಂಡಲಂನಲ್ಲಿ ತನ್ನ ಪುತ್ರ ಕಲಿಯುತ್ತಿದ್ದಾಗ ಆತನಿಗಾದ ಕಹಿ ಅನುಭವಗಳನ್ನು ಕೂಡಾ ಧನುಜಾ ಕುಮಾರಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ಕಡುಬಡತನದಿಂದ ಶಾಲೆಯನ್ನು ಅರ್ಧದಲ್ಲೇ ತ್ಯಜಿಸಿರುವ ಧನುಜಾ ಕುಮಾರಿ ಈಗ ಮನೆಮನೆಯಿಂದ ತ್ಯಾಜ್ಯಗಳನ್ನು ಸಂಗ್ರಹಿಸುವ ಹರಿತಾ ಕರ್ಮಸೇನಾದ ಸದಸ್ಯೆಯಾಗಿದ್ದಾರೆ. ಸಾಂಸ್ಕೃತಿಕ ಕಾರ್ಯಕರ್ತರ ತಂಡದ ಮೂಲಕ ತನಗೆ ಪರಿಚಯವಾದ ಬರಹಗಾರ್ತಿ ವಿಜಿಲಾ ಅವರು ಧನುಜಾಗೆ ಆಕೆ ಬರೆದಿದ್ದ ಪುಸ್ತಕವನ್ನು ಪ್ರಕಟಿಸುವಂತೆ ಪ್ರೇರೇಪಿಸಿದ್ದರು.
ಧನುಜಾ ಕುಮಾರಿಯ ಸಾಹಿತ್ಯ ಕೃಷಿಗೆ ಆಕೆಯ ಕುಟುಂಬಿಕರೂ ಬೆಂಬಲ ನೀಡಿದ್ದರು. ಆಕೆಯ ಪತಿ ಸತೀಶ್ ಅವರು ಚೆಂಡೆ ವಾದ್ಯ ಕಲಾವಿದರಾಗಿದ್ದರೆ, ಆಕೆಯ ಇಬ್ಬರು ಪುತ್ರರಾದ ನಿಧೀಶ್ ಹಾಗೂ ಸುಧೀಶ್ ಅವರು ಕೂಡಾ ಕಲಾವಿದರು. ತನ್ನ ಮೊದಲ ಕೃತಿಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಪ್ರೇರಿತರಾದ ಧನುಜಾ ಕುಮಾರಿ, ಇದೀಗ ಚೆಂಕಾಲ್ ಚೂಲಾದ ಇತಿಹಾಸ ಕುರಿತ ಪುಸ್ತಕವನ್ನು ಬರೆಯ ಹೊರಟಿದ್ದಾರೆ.